ನವದೆಹಲಿ:ದೇಶದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದ್ದು, ಅನೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ತಾಪಮಾನ ಹೆಚ್ಚಿದಂತೆ ಆರೋಗ್ಯ ಸಂಬಂಧಿ ಅಸ್ವಸ್ಥತೆ ಬಗ್ಗೆ ಜನರು ಹೆಚ್ಚಿನ ಜಾಗ್ರತೆ ವಹಿಸಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಶನಿವಾರ ಹವಾಮಾನದ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬರಲಿರುವ ವಾರದಲ್ಲಿ ರಾಷ್ಟ್ರ ರಾಜಧಾನಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಾಪಮಾನವು 39 ಡಿಗ್ರಿ ಸೆಲ್ಶಿಯಸ್ಗೆ ಹೆಚ್ಚಳ ಕಾಣಲಿದೆ ಎಂದು ತಿಳಿಸಿದೆ. ಬಿಹಾರ, ಒಡಿಶಾ, ಮಹಾರಾಷ್ಟ್ರ ಕೇರಳ ಮತ್ತು ಕರ್ನಾಟಕದಲ್ಲಿ ಈಗಾಗಲೇ ತೀವ್ರತರದ ಬಿಸಿಲಿನ ಪ್ರತಾಪವನ್ನು ಎದುರಿಸುತ್ತಿವೆ.
ತಾಪಮಾನದ ಬಗ್ಗೆ ಎಚ್ಚರವಹಿಸುವುದು ಅವಶ್ಯ. ಆಲಸ್ಯ, ಬಿಸಿ ತ್ವಚೆಗಳ ಲಕ್ಷಣಗಳನ್ನು ಗಮನಿಸಬೇಕು. ಅಧಿಕ ಶಾಖದಿಂದ ಹೃದಯ ರಕ್ತನಾಳದ ಸಮಸ್ಯೆ ಹೆಚ್ಚಬಹುದು ಎಂದು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಕನ್ಸಲ್ಟಂಟ್ ಪಂಕಜ್ ಚೌಧರಿ ತಿಳಿಸಿದ್ದಾರೆ.
ಶಾಖವು ಮಾರಣಾಂತಿಕ ಎಂಬುದನ್ನು ಮರೆಯಬಾರದು. ವಿಶೇಷವಾಗಿ ದುರ್ಬಲ ಜನರಲ್ಲಿ ಇದರ ಪರಿಣಾಮ ಹೆಚ್ಚಿದೆ. ಈ ಹಿನ್ನೆಲೆ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ಆರೋಗ್ಯದ ಮಾರ್ಪಾಡನ್ನು ಮಾಡಿಕೊಳ್ಳಬೇಕಿದೆ ಎಂದರು.
ಈ ವಾರದ ಆರಂಭದಲ್ಲಿ ಕೂಡ ಆರೋಗ್ಯ ಸಚಿವಾಲಯ, ದೇಶದಲ್ಲಿ ಶಾಖ ಸಂಬಂಧಿತ ಅಸ್ವಸ್ಥತೆ ಹಿನ್ನೆಲೆ ಸಾರ್ವಜನಿಕರ ಆರೋಗ್ಯ ಸಿದ್ಧತೆ ಕುರಿತು ಸಭೆ ನಡೆಸಿತ್ತು. ಶಾಖದ ಅಲೆ ಪರಿಣಾಮವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಸಮಯೋಚಿತ, ಮುಂಚಿತವಾಗಿ ಮತ್ತು ವ್ಯಾಪಕವಾದ ಜಾಗೃತಿಯು ಅಪಾಯ ಕಡಿಮೆ ಮಾಡಲು ಹೆಚ್ಚು ಬೆಂಬಲ ನೀಡುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.