ಹಗಲು ಹೊತ್ತು ಮಲಗುವುದು ಅಥವಾ ಚಿಕ್ಕನಿದ್ರೆ ಮಾಡುವುದರಿಂದ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಮಕ್ಕಳ ಕಲಿಕೆ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ನಿದ್ರೆ ಮಾಡುವುದರಿಂದ ಮಕ್ಕಳು ವಿಷಯಗಳನ್ನು ಉತ್ತಮವಾಗಿ ನೆನಪಿಸಿಕೊಳ್ಳುತ್ತಾರೆ. ಏಕೆಂದರೆ, ಅವರ ಅಲ್ಪಾವಧಿಯ ನೆನಪುಗಳನ್ನು ವಯಸ್ಕರಂತೆ ಸಂಗ್ರಹಿಸಲಾಗುವುದಿಲ್ಲ. ಆದ್ದರಿಂದ ಅವರ ಮೆದುಳನ್ನು ರಿಫ್ರೆಶ್ ಮಾಡಲು ಅವರಿಗೆ ಆಗಾಗ್ಗೆ ವಿಶ್ರಾಂತಿ ಬೇಕಾಗುತ್ತದೆ. ಅಚ್ಚರಿಯೆಂಬಂತೆ, ಇತ್ತೀಚಿನ ಸಂಶೋಧನೆ ಹಗಲಿನ ನಿದ್ರೆ ವಯಸ್ಕರಿಗೆ ಎಷ್ಟು ಮುಖ್ಯ ಎಂಬುದನ್ನು ಬಹಿರಂಗಪಡಿಸಿದೆ.
ಹಗಲಿನಲ್ಲಿ ಚಿಕ್ಕನಿದ್ರೆ ಆರೋಗ್ಯಕರ ಅಭ್ಯಾಸ: ಹಗಲಿನಲ್ಲಿ ಮಲಗುವುದು ಅಥವಾ ನಿದ್ದೆ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಚಿಕ್ಕನಿದ್ರೆ ಮಾಡುವುದರಿಂದ ಸಾಮಾನ್ಯವಾಗಿ ಸೋಮಾರಿತನ ಕಾಡುತ್ತದೆ ಎಂದು ಬಹುತೇಕ ಭಾವಿಸುತ್ತಾರೆ. ಆದ್ರೆ, ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಹಗಲಿನಲ್ಲಿ ನಿದ್ದೆ ಮಾಡುವುದನ್ನು ಉತ್ತೇಜಿಸಲು ಕೆಲವು ಖಾಸಗಿ ಕಂಪನಿಗಳ ಕೆಲಸದ ಸ್ಥಳಗಳಲ್ಲಿ 'ಸ್ಲೀಪಿಂಗ್ ರೂಮ್'ಗಳನ್ನೂ ಸಹ ಪರಿಚಯಿಸಲಾಗುತ್ತಿದೆ.
ಸಾಮಾನ್ಯವಾಗಿ ಬಹುತೇಕ ಜನರಿಗೆ ಹಗಲಿನಲ್ಲಿ ಚಿಕ್ಕನಿದ್ರೆ ಮಾಡಬೇಕೆಂದು ಅನಿಸುವುದು ಸಹಜ. ವಿಶೇಷವಾಗಿ ನೀವು ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಬೆಳಿಗ್ಗೆ ದಣಿದಿದ್ದರೆ, ಕೆಲವರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇತ್ತೀಚಿನ ಅಧ್ಯಯನಗಳು ಅದನ್ನು ಆರೋಗ್ಯಕರ ಅಭ್ಯಾಸವೆಂದು ತಿಳಿಸಿವೆ. ಹಗಲಿನಲ್ಲಿ ನಿದ್ರಿಸುವುದು ಅಥವಾ ಚಿಕ್ಕನಿದ್ರೆ ಮಾಡುವುದು ಜಾಗರೂಕತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಮರಣೆ ಶಕ್ತಿಯನ್ನೂ ಸುಧಾರಿಸುತ್ತದೆ.
ನಿದ್ರೆ ಮಾಡಿದ ನಂತರ ಜನರು ಸಂಖ್ಯೆಗಳು, ಪದಗಳನ್ನು ಉತ್ತಮವಾಗಿ ನೆನಪಿಟ್ಟುಕೊಳ್ಳಲು ಸಾಧ್ಯ ಎಂದು ಪರೀಕ್ಷೆಗಳು ತೋರಿಸುತ್ತವೆ. ಪ್ರಕ್ಷುಬ್ಧ ಸ್ವಭಾವದ ಜನರು ದಿನದಲ್ಲಿ ಚಿಕ್ಕನಿದ್ರೆ ತೆಗೆದುಕೊಂಡ ನಂತರ ಹೆಚ್ಚು ಶಾಂತವಾಗುತ್ತಾರೆ. ಅಷ್ಟೇ ಅಲ್ಲ ಇದು ಕಡಿಮೆ ಕಿರಿಕಿರಿಯುಂಟು ಮಾಡುತ್ತಾರೆ.
ಡಾಕ್ಟರ್ ಆಫ್ ಫಾರ್ಮಸಿ ಮತ್ತು ಹೃದಯರಕ್ತನಾಳದ ಸಂಶೋಧನಾ ವಿಜ್ಞಾನಿ ಜೇಮ್ಸ್ ಡಿನಿಕೊಲಾಂಟೋನಿಯೊ ಪ್ರಕಾರ, ''ಮಧ್ಯಾಹ್ನದ 20 ನಿಮಿಷಗಳ ನಿದ್ದೆ ಮಾಡುವುದು ನಿಮ್ಮ ಮೆದುಳಿಗೆ ಪೆನ್ಸಿಲ್ ಶಾರ್ಪನರ್ ಇದ್ದಂತೆ. 20 ನಿಮಿಷಗಳ ನಿದ್ದೆ ಮಾಡಿ, ನಿಮ್ಮ ಮನಸ್ಥಿತಿ, ಶಕ್ತಿ ಮತ್ತು ಗಮನವು ನಿಮಗೆ ಉತ್ತಮವಾಗಿರುತ್ತದೆ" ಎಂದು ತಿಳಿಸಿದ್ದಾರೆ.
ಮೆದುಳಿನ ಶಕ್ತಿ ಹೆಚ್ಚಿಸುತ್ತದೆ: ಮೆದುಳು ರಾಸಾಯನಿಕ ಸಂಕೇತಗಳ ಮೂಲಕ ಕೆಲಸ ಮಾಡುತ್ತದೆ. ಒಂದು ಸಣ್ಣ ನಿದ್ದೆಯು ಮನಸ್ಸನ್ನು ರಿಫ್ರೆಶ್ ಮಾಡಬಹುದು, ಇದು ಮರೆವು ಬೇಗನೆ ಬೆಳವಣಿಗೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಆಯಾಸ ಹೋಗಲಾಡಿಸುತ್ತದೆ: ವಾಹನ ಅಥವಾ ಭಾರೀ ಯಂತ್ರೋಪಕರಣಗಳನ್ನು ಚಾಲನೆ ಮಾಡುವಾಗ ಆಯಾಸ ಅಪಾಯಕಾರಿ. ಹಗಲಿನಲ್ಲಿ ಒಂದು ಸಣ್ಣ ನಿದ್ರೆ ನಿಮ್ಮ ಪ್ರತಿಕ್ರಿಯೆಯ ವೇಗ ಹೆಚ್ಚಿಸುತ್ತದೆ. ಮತ್ತು ಅಪಘಾತಗಳನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ದೂರದ ಪ್ರಯಾಣಕ್ಕೆ ಹೋಗಬೇಕಾದರೆ, ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನಿದ್ರಾಹೀನತೆ ಮತ್ತು ಆಯಾಸವನ್ನು ನಿವಾರಿಸಲು ಸಹಕಾರಿಯಾಗುತ್ತದೆ.
ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ: ಹಗಲಿನಲ್ಲಿ ನಿದ್ರೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಸೋಂಕು ಮತ್ತು ಉರಿಯೂತವನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಸಾಮಾನ್ಯವಾಗಿ ರೋಗಿಗಳಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡುತ್ತಾರೆ.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಹಗಲಿನಲ್ಲಿ ಚಿಕ್ಕನಿದ್ರೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಒತ್ತಡದ ಸಂದರ್ಭಕ್ಕೂ ಮುನ್ನ ನಿದ್ರೆ ಮಾಡುವುದು ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಯಾವಾಗ ಚಿಕ್ಕ ನಿದ್ರೆ ಮಾಡಬೇಕು?: ಬೆಳಿಗ್ಗೆ ಎದ್ದ ಬಳಿಕ ಅಂದ್ರೆ, 6 ರಿಂದ 8 ಗಂಟೆಗಳ ನಂತರ ಚಿಕ್ಕನಿದ್ರೆ ಮಾಡುವುದು ಉತ್ತಮ. ಏಕೆಂದರೆ ಈ ಹೊತ್ತಿಗೆ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಾರ್ಟಿಸೋಲ್ ಹಾರ್ಮೋನ್ ನಿಮ್ಮನ್ನು ಎಚ್ಚರವಾಗಿರಿಸಲು ಸಹಾಯ ಮಾಡುತ್ತದೆ. ದಿನದಲ್ಲಿ ಚಿಕ್ಕನಿದ್ರೆ ತೆಗೆದುಕೊಳ್ಳುವುದು ಸೃಜನಶೀಲತೆ ಹೆಚ್ಚಿಸುತ್ತದೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.