ಕರ್ನಾಟಕ

karnataka

ETV Bharat / health

ಕಿವಿ ಹಣ್ಣು ಸೇವನೆ ಮಾನಸಿಕ ಆರೋಗ್ಯಕ್ಕೆ ಪೂರಕ: ಸಂಶೋಧನಾ ವರದಿ

ಕಿವಿ ಹಣ್ಣಿನ ಸೇವನೆಯಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ಸಂಶೋಧನಾ ವರದಿ ಹೇಳಿದೆ.

Kiwifruit may help improve your mental health in just 4 days: Study
Kiwifruit may help improve your mental health in just 4 days: Study

By ETV Bharat Karnataka Team

Published : Jan 28, 2024, 7:45 PM IST

ವೆಲ್ಲಿಂಗ್ಟನ್ : ನೀವು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದೀರಾ? ಹಾಗಾದರೆ ಕಿವಿ ಹಣ್ಣನ್ನು ಸೇವಿಸುವ ಮೂಲಕ ನಾಲ್ಕು ದಿನಗಳಲ್ಲಿ ನಿಮ್ಮ ಚೈತನ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಬಹುದು ಎಂದು ಅಧ್ಯಯನವೊಂದು ಹೇಳಿದೆ. ಜನ ತಮ್ಮ ಮಾನಸಿಕ ಯೋಗಕ್ಷೇಮ ಸುಧಾರಿಸಿಕೊಳ್ಳಲು ಸ್ಪಷ್ಟ ಮತ್ತು ಅಳವಡಿಸಿಕೊಳ್ಳಬಹುದಾದ ಮಾರ್ಗವನ್ನು ಈ ಸಂಶೋಧನೆಗಳು ಒದಗಿಸುತ್ತವೆ ಎಂದು ನ್ಯೂಜಿಲೆಂಡ್​ನ ಒಟಾಗೊ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಸಹ-ಸಂಶೋಧಕ ಪ್ರೊಫೆಸರ್ ಟಾಮ್ಲಿನ್ ಕಾನರ್ ಹೇಳಿದ್ದಾರೆ. "ಪ್ರತಿದಿನ ಜನ ತಮ್ಮ ಆಹಾರದಲ್ಲಿ ಕಿವಿಹಣ್ಣು ಸೇರಿಸುವ ಮೂಲಕ ಮಾನಸಿಕ ಆರೋಗ್ಯದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂಬುದು ತಿಳಿದರೆ ಬೆರಗಾಗುವಿರಿ" ಎಂದು ಅವರು ತಿಳಿಸಿದ್ದಾರೆ.

ವಿಟಮಿನ್ ಸಿ ಸೇವನೆಯು ಮನಸ್ಥಿತಿಯ ಸುಧಾರಣೆ, ಚೈತನ್ಯ, ಯೋಗಕ್ಷೇಮ ಮತ್ತು ಖಿನ್ನತೆ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಹಾಗೆಯೇ ವಿಟಮಿನ್ ಸಿ ಕೊರತೆಯು ಹೆಚ್ಚಿನ ಖಿನ್ನತೆ ಮತ್ತು ಅರಿವಿನ ದುರ್ಬಲತೆಗೆ ಕಾರಣವಾಗಬಹುದು.

ವಿಟಮಿನ್ ಸಿ ಪೂರಕಗಳು ಅಥವಾ ಸಂಪೂರ್ಣ ಆಹಾರ ಮೂಲಗಳನ್ನು ಅಳವಡಿಸಿಕೊಂಡ ನಂತರ ಮಾನಸಿಕ ಸ್ಥಿತಿಗತಿಗಳು ಎಷ್ಟು ಬೇಗ ಸುಧಾರಿಸುತ್ತವೆ ಎಂಬುದನ್ನು ಸೀಮಿತ ಸಂಶೋಧನೆಯ ಮೂಲಕ ಮೌಲ್ಯಮಾಪನ ಮಾಡಲಾಗಿದೆ ಎಂದು ಕಾನರ್ ಹೇಳಿದರು.

ಕಡಿಮೆ ವಿಟಮಿನ್ ಸಿ ಹೊಂದಿರುವ 155 ವಯಸ್ಕರಿಗೆ 8 ವಾರಗಳ ಆಹಾರ ಮಧ್ಯಸ್ಥಿಕೆಯೊಂದಿಗೆ ಆ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಂಶೋಧಕರು ಹೊಂದಿದ್ದರು. ಸಂಶೋಧನೆಯಲ್ಲಿ ಭಾಗವಹಿಸಿದ್ದವರು ಪ್ರತಿದಿನ ವಿಟಮಿನ್ ಸಿ ಪೂರಕ, ಪ್ಲಸೀಬೊ ಅಥವಾ ಎರಡು ಕಿವಿಹಣ್ಣುಗಳನ್ನು ಸೇವಿಸಿದರು. ನಂತರ ಅವರು ತಮ್ಮ ಸ್ಮಾರ್ಟ್​ಫೋನ್ ಬಳಸಿಕೊಂಡು ತಮ್ಮ ಚೈತನ್ಯ, ಮನಸ್ಥಿತಿ, ನಿದ್ರೆಯ ಗುಣಮಟ್ಟ, ನಿದ್ರೆಯ ಪ್ರಮಾಣ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ವರದಿ ಮಾಡಿದರು.

ದಿ ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್​ ಜರ್ನಲ್​ನಲ್ಲಿ ಈ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ. ಕಿವಿಹಣ್ಣನ್ನು ಪೂರಕವಾಗಿ ಸೇವಿಸಲು ಆರಂಭಿಸಿದ ನಾಲ್ಕು ದಿನಗಳಲ್ಲಿ ಚೈತನ್ಯ ಮತ್ತು ಮನಸ್ಥಿತಿ ಸುಧಾರಿಸಿರುವುದು, ಸುಮಾರು 14-16 ದಿನಗಳಲ್ಲಿ ಅದು ಉತ್ತುಂಗಕ್ಕೇರಿದ್ದು ಮತ್ತು 14 ನೇ ದಿನದಿಂದ ಅಭಿವೃದ್ಧಿ ಹೊಂದಿರುವುದು ಕಂಡು ಬಂದಿದೆ. ಮತ್ತೊಂದೆಡೆ ವಿಟಮಿನ್ ಸಿ 12 ನೇ ದಿನದವರೆಗೆ ಮೂಡ್​ ಅನ್ನು ಸ್ವಲ್ಪ ಸುಧಾರಿಸಿತ್ತು.

"ಈ ಪರಿಣಾಮಗಳು ಪ್ರತಿದಿನ ಯಾವಾಗ ಮತ್ತು ಹೇಗೆ ಸಂಭವಿಸುತ್ತವೆ ಎಂಬುದರ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ವಿಟಮಿನ್ ಸಿ ಸಮೃದ್ಧ ಆಹಾರಗಳು ಮತ್ತು ಪೂರಕಗಳ ಸಂಭಾವ್ಯ ಪ್ರಯೋಜನಗಳ ಬಗ್ಗೆ ನಮ್ಮ ಜ್ಞಾನಕ್ಕೆ ಕೊಡುಗೆ ನೀಡುತ್ತದೆ" ಎಂದು ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಡಾ. ಬೆನ್ ಫ್ಲೆಚರ್ ತಿಳಿಸಿದರು.

ಇದನ್ನೂ ಓದಿ : ಸಸ್ಯ ಮೂಲದ ಪ್ರೋಟೀನ್ ಸೇವನೆಯಿಂದ ಹೆಚ್ಚಿನ ಆರೋಗ್ಯ; ಸಂಶೋಧನಾ ವರದಿ

ABOUT THE AUTHOR

...view details