ನಮಗೆ ಹೆಚ್ಚಿನ ಸೋಂಕುಗಳು ಬಾಯಿಯ ಮೂಲಕವೇ ಹರಡುತ್ತವೆ. ಆದ್ದರಿಂದ ನಿಯಮಿತವಾಗಿ ಬಾಯಿಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆದಾಗ್ಯೂ, ಅನೇಕ ಜನರು ಹಲ್ಲುಜ್ಜುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳಿಂದ ಹಲ್ಲು ಮತ್ತು ವಸಡುಗಳ ಮೇಲೆ ಪರಿಣಾಮ ಉಂಟಾಗುತ್ತವೆ. ವಸಡುಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದಲ್ಲದೆ, ಸರಿಯಾಗಿ ಹಲ್ಲುಜ್ಜದೇ ಇರುವುದು ಕೂಡ ಹಲ್ಲುನೋವು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ರಿಪೋರ್ಟ್ ತಿಳಿಸುವ ಪ್ರಕಾರ, ಬ್ರಷ್ ಮಾಡುವುದು ಹೇಗೆ? ನಾನು ಯಾವ ರೀತಿಯ ಬ್ರಷ್ ಬಳಸಬೇಕು? ಬ್ರಷ್ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕೆಂಬ ಪ್ರಶ್ನೆಗಳಿಗೆ ಖ್ಯಾತ ದಂತ ವೈದ್ಯ ಡಾ.ವಿಕಾಸ್ ಗೌಡ್ ಉತ್ತರಿಸಿದ್ದಾರೆ.
ದಂತ ವೈದ್ಯರ ಮಹತ್ವದ ಸಲಹೆಗಳು:ಡಾ.ವಿಕಾಸ್ ಗೌಡ್ ಮಾತನಾಡಿ, "ಹಲ್ಲುಜ್ಜುವ ಬ್ರಷ್ ಅನ್ನು ಹೆಚ್ಚು ದಿನಗಳವರೆಗೆ ಬಳಸಬಾರದು. ಸಾಮಾನ್ಯವಾಗಿ ಬ್ರಷ್ ಅನ್ನು ಪ್ರತಿ 3 ತಿಂಗಳಿಗೊಮ್ಮೆ ಬದಲಾಯಿಸಬೇಕು. ವಿಶೇಷವಾಗಿ, ಅನಾರೋಗ್ಯದ ಸಂದರ್ಭದಲ್ಲಿ ಬ್ರಷ್ ಅನ್ನು ಬದಲಾಯಿಸಲು ಮರೆಯಬಾರದು. ಟೂತ್ ಬ್ರಷ್ ಅನ್ನು ದೀರ್ಘಕಾಲ ಬಳಸುವುದರಿಂದ ಬ್ರಷ್ ಮೇಲೆ ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ಇನ್ಫೆಕ್ಷನ್ ಆಗುವ ಅಪಾಯ ಹೆಚ್ಚು. ಅಲ್ಲದೆ, ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತು ರಾತ್ರಿ) ಬ್ರಷ್ ಮಾಡಬೇಕು. ದೀರ್ಘಕಾಲ ಹಲ್ಲುಜ್ಜುವ ಬದಲು 2ರಿಂದ 4 ನಿಮಿಷಗಳ ಕಾಲ ಉತ್ತಮ ಟೂತ್‌ಪೇಸ್ಟ್‌ನಿಂದ ಬ್ರಷ್ ಮಾಡುವುದು ಉತ್ತಮ" ಎಂದು ಅವರು ತಿಳಿಸಿದರು.
ಹಲ್ಲುಜ್ಜುವುದು ಹೇಗೆ?:ಬಹಳ ಹೊತ್ತು ಗಟ್ಟಿಯಾಗಿ ಅಥವಾ ಜೋರಾಗಿ ಹಲ್ಲುಜ್ಜಿದರೆ ಹಲ್ಲುಗಳು ಸ್ವಚ್ಛವಾಗಿರುತ್ತವೆ ಎಂಬುದು ಅನೇಕರ ನಂಬಿಕೆ. ಆದರೆ, ಹೀಗೆ ಮಾಡುವುದರಿಂದ ತೊಂದರೆಯೇ ಜಾಸ್ತಿ. ಹೆಚ್ಚು ಹೊತ್ತು ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲೆ ಎನಾಮೆಲ್ ಹಾಳಾಗುತ್ತದೆ. ಅಲ್ಲದೆ, ಸರಿಯಾದ ಹಲ್ಲುಜ್ಜುವ ತಂತ್ರಗಳನ್ನು ಅನುಸರಿಸಬೇಕು. ಕೆಲವರು ಹಲ್ಲುಗಳ ಬದಿಗಳನ್ನು ಮಾತ್ರ ಬ್ರಷ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ವಸಡು ಸವೆಯುತ್ತದೆ. ಬ್ರಷ್ ಮಾಡುವಾಗ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಸ್ವಚ್ಛಗೊಳಿಸಬೇಕು.