New Type Of Blood Test:ಭವಿಷ್ಯದಲ್ಲಿ ಮಕ್ಕಳಲ್ಲಿ ಮಧುಮೇಹದ ಸಾಧ್ಯತೆಯನ್ನು ಗುರುತಿಸಲು ಬ್ರಿಟಿಷ್ ವಿಜ್ಞಾನಿಗಳು ಹೊಸ ರಕ್ತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪರೀಕ್ಷೆಯು ಈಗ ಸ್ಥೂಲಕಾಯಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಆರಂಭಿಕ ಎಚ್ಚರಿಕೆಗಳನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮಕ್ಕಳ ರಕ್ತದ ಪ್ಲಾಸ್ಮಾವನ್ನು ಪರೀಕ್ಷಿಸಲು ಈಗಾಗಲೇ ಹಲವಾರು ಪರೀಕ್ಷೆಗಳು ಲಭ್ಯವಿವೆ. ಈ ಪರೀಕ್ಷೆಯ ಸಹಾಯದಿಂದ ಮಕ್ಕಳಲ್ಲಿ ಮಧುಮೇಹದ ಆರಂಭಿಕ ಚಿಹ್ನೆಗಳನ್ನು ಕಂಡು ಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ. ವಿಜ್ಞಾನಿಗಳು, ದಶಕಗಳಿಂದ ದೇಹದಲ್ಲಿ ಕೊಬ್ಬಿನಾಮ್ಲಗಳಾಗಿ ಲಿಪಿಡ್ಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಇವುಗಳಿಂದ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ವರ್ಗೀಕರಿಸಲಾಗಿದೆ. ಲಿಪಿಡ್‌ಗಳನ್ನು ಆಳವಾಗಿ ಗಮನಿಸಿದ ವಿಜ್ಞಾನಿಗಳು ಅವುಗಳ ರಚನೆಗಳು ಹೆಚ್ಚು ಸಂಕೀರ್ಣವಾಗಿವೆ ಎಂದು ಕಂಡು ಹಿಡಿದಿದ್ದಾರೆ.
ಮಾಸ್ ಸ್ಪೆಕ್ಟ್ರೋಮೆಟ್ರಿಯಿಂದ ವಿಶ್ಲೇಷಿಸಿದಾಗ ಸಂಶೋಧಕರು ದೇಹದಲ್ಲಿ ಸಾವಿರಾರು ಲಿಪಿಡ್‌ಗಳನ್ನು ಗುರುತಿಸಿದ್ದಾರೆ. ಪ್ರತಿಯೊಂದಕ್ಕೂ ವಿಭಿನ್ನ ಪಾತ್ರವಿದೆ ಎಂದು ತೀರ್ಮಾನಿಸಲಾಯಿತು. ಅವುಗಳನ್ನು ವಿಸ್ತೃತವಾಗಿ ವಿಶ್ಲೇಷಿಸುವ ಮೂಲಕ ಸ್ಥೂಲಕಾಯಕ್ಕೆ ಸಂಬಂಧಿಸಿದ ಕಾಯಿಲೆಗಳ ಮುನ್ನೆಚ್ಚರಿಕೆಯ ಲಕ್ಷಣಗಳನ್ನು ಪತ್ತೆ ಹಚ್ಚಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
"ಈ ಸಂಶೋಧನೆಯು ಭವಿಷ್ಯದಲ್ಲಿ ವ್ಯಕ್ತಿಯ ರೋಗದ ಅಪಾಯ ಊಹಿಸಲು ಉಪಯುಕ್ತವಾಗಿದೆ. ದೇಹದಲ್ಲಿ ಲಿಪಿಡ್ ಅಣುಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅಧ್ಯಯನ ಮಾಡುವ ಮೂಲಕ, ಮಧುಮೇಹ ಮತ್ತು ಸ್ಥೂಲಕಾಯತೆ ಪತ್ತೆಹಚ್ಚಬಹುದು ಮತ್ತು ತಡೆಗಟ್ಟಬಹುದು" ಎಂದು ಡಾ. ಕ್ರಿಸ್ಟಿನಾ ಲೆಗಿಡೋ- ಕ್ವಿಗ್ಲೆ ಹೇಳಿದ್ದಾರೆ.