ಕ್ಯಾನ್ಸರ್ ವಿಶ್ವದಲ್ಲಿ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿರುವ ರೋಗಗಳಲ್ಲೊಂದು. ಭಾರತದಲ್ಲಿ ಪ್ರತಿವರ್ಷ ಸುಮಾರು 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತವೆ. 8 ಲಕ್ಷ 50 ಸಾವಿರಕ್ಕೂ ಹೆಚ್ಚು ಜನ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಕ್ಯಾನ್ಸರ್ 'ಸುನಾಮಿ' ವೇಗವಾಗಿ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಕ್ಯಾನ್ಸರ್ ರೋಗಿಗಳಿಗೆ ಆರೈಕೆಯನ್ನು ಸುಧಾರಿಸುವುದರ ಜೊತೆಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಶ್ವದಾದ್ಯಂತ ದೇಶಗಳಲ್ಲಿ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವಾಗಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗ ಬಂದ ಮೇಲೆ ಅದರಿಂದ ಪೀಡಿತರ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ರೋಗಪತ್ತೆ ಮತ್ತು ಚಿಕಿತ್ಸೆಯ ನಂತರ ದೈಹಿಕ, ಆರ್ಥಿಕ ಮತ್ತು ಭಾವನಾತ್ಮಕ ಕಷ್ಟಗಳು ಹೆಚ್ಚಾಗುತ್ತವೆ. ನಾವು ಇವತ್ತು ಅಸಾಧಾರಣ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದ್ದರೂ ಕೂಡ ಕಳಪೆ ಸಂವಹನ ಕೌಶಲ್ಯಗಳ ಕಾರಣದಿಂದ ಭಾರತದಲ್ಲಿ ಕ್ಯಾನ್ಸರ್ಗೆ ಪರಿಣಾಮಕಾರಿ ಆರೈಕೆ ಒದಗಿಸುವಲ್ಲಿ ಅಡೆತಡೆ ಎದುರಾಗುತ್ತಿವೆ.
ಕ್ಯಾನ್ಸರ್ ಬಂದಿದೆ ಎಂದು ತಿಳಿಯುವುದು ವ್ಯಕ್ತಿಯೊಬ್ಬನ ಜೀವನದಲ್ಲಿ ಅತಿ ಆಘಾತಕಾರಿ ಸಂದರ್ಭವಾಗಿರುತ್ತದೆ. ವಿಶೇಷವಾಗಿ, ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ ಬಂದಾಗ ಈ ಆಘಾತವನ್ನು ತಾಳಿಕೊಳ್ಳುವುದು ಕಷ್ಟಕರ. ನಿಜವಾಗಿಯೂ ನನಗೆ ಕ್ಯಾನ್ಸರ್ ಬಂದಿದೆಯಾ ಎಂದು ರೋಗಿಯು ಕೇಳಲಾರಂಭಿಸುತ್ತಾನೆ. ಆತಂಕ, ಕೋಪ, ಪ್ರತ್ಯೇಕತೆ ಮತ್ತು ಸಾಯುವ ಭಯದಂತಹ ಭಾವನೆಗಳ ವ್ಯಾಪ್ತಿಯೊಂದಿಗೆ ಜೀವನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದು ತುಂಬಾ ಸಾಮಾನ್ಯ ಮತ್ತು ಸ್ವಾಭಾವಿಕವಾಗಿದೆ. 'ನಾನು ನನ್ನ ಸ್ತನವನ್ನು ಕಳೆದುಕೊಳ್ಳುತ್ತೇನೆಯೇ?' ಎಂಬುದು ಸ್ತನ ಕ್ಯಾನ್ಸರ್ ಪತ್ತೆಯಾದಾಗ ಮನಸ್ಸಿಗೆ ಬರುವ ಮೊದಲ ಪ್ರಶ್ನೆಗಳಲ್ಲಿ ಒಂದಾಗಿದೆ.
ಕ್ಯಾನ್ಸರ್ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕೇವಲ ದೇಹಕ್ಕೆ ಚಿಕಿತ್ಸೆ ನೀಡಿದರೆ ಸಾಲದು. ಹೀಗಾಗಿ ಸಮಾಲೋಚನೆ ಕೂಡ ಕ್ಯಾನ್ಸರ್ ಆರೈಕೆಯ ಒಂದು ಪ್ರಮುಖ ಅಂಶವಾಗಿದೆ. ಇದು ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಉತ್ತಮ ಮಾಹಿತಿ, ಉತ್ತಮವಾಗಿ ಸಿದ್ಧರಾಗಲು ಮತ್ತು ಮುಖ್ಯವಾಗಿ, ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚು ನಿಯಂತ್ರಣ ಇಟ್ಟುಕೊಳ್ಳಲು ವಿಶಿಷ್ಟ ಅವಕಾಶ ನೀಡುತ್ತದೆ.
ಪರಿಣಾಮಕಾರಿ ಚಿಕಿತ್ಸೆ ಮತ್ತು ಪರಿಣಾಮಕಾರಿ ಸಂವಹನ ಎರಡೂ ಪ್ರತಿಯೊಬ್ಬ ವೈದ್ಯರಿಗೆ ಅತ್ಯಗತ್ಯ ಕೌಶಲ್ಯಗಳಾಗಿವೆ. ನನ್ನ ಅಭಿಪ್ರಾಯದಲ್ಲಿ, ಸಮಾಲೋಚನೆಯು ಶೇ.50ಕ್ಕಿಂತ ಹೆಚ್ಚು ಚಿಕಿತ್ಸೆಯನ್ನು ಒಳಗೊಂಡಿದೆ. ಏಕೆಂದರೆ ಇದು ಮನಸ್ಸು, ದೇಹ ಮತ್ತು ಆತ್ಮದ ಚೇತರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಸೂಕ್ಷ್ಮ ಮತ್ತು ಬೆಂಬಲಿತ ವಾತಾವರಣದಲ್ಲಿ ರೋಗನಿರ್ಣಯ/ವಿವಿಧ ಚಿಕಿತ್ಸಾ ಆಯ್ಕೆಗಳ ಬಗ್ಗೆ ತಜ್ಞರು ಮತ್ತು ರೋಗಿಯ ನಡುವೆ ಯಾವುದೇ ತೊಂದರೆಯಿಲ್ಲದ ಚರ್ಚೆಯನ್ನು ಒಳಗೊಂಡಿರುತ್ತದೆ. ಅದೇ ರೀತಿ, ಕೌನ್ಸೆಲಿಂಗ್ ಸೆಷನ್‌ಗಳಲ್ಲಿ ಸಾಕಷ್ಟು ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ನೀಡಲಾಗುತ್ತದೆ. ಇದು ಅವರ ಜೀವನದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಹೆಚ್ಚು ಅಗತ್ಯವಿರುವ 'ಆಂತರಿಕ ಶಕ್ತಿ' ಮತ್ತು ದೃಢನಿಶ್ಚಯವನ್ನು ಮೂಡಿಸುತ್ತದೆ.