Brain cancer from the phone?:ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ? ಈ ವಿಷಯದ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಿವೆ. ಈ ಕುರಿತಂತೆ ಕೆಲವು ತಪ್ಪು ಕಲ್ಪನೆಗಳು ಹಲವರಲ್ಲಿ ಮೂಡಿದ್ದವು. ಈ ಹಿಂದೆ ಪ್ರಕಟವಾದ ಕೆಲವು ಅಧ್ಯಯನಗಳು ಮೊಬೈಲ್ ಫೋನ್‌ಗಳಿಂದ ಬರುವ ರೇಡಿಯೊ ತರಂಗಗಳು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾದ ಗ್ಲಿಯೊಮಾ ಟ್ಯೂಮರ್‌ಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದವು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಅಧ್ಯಯನವು ಈ ತಪ್ಪು ಕಲ್ಪನೆಗಳನ್ನು ತಿರಸ್ಕರಿಸಿ, ಸತ್ಯ ಬಹಿರಂಬಪಡಿಸಿದೆ.
ARPANSA ಸಂಶೋಧನೆ ಹೀಗೆ ತಿಳಿಸುತ್ತೆ:WHO ಪರವಾಗಿ ಆಸ್ಟ್ರೇಲಿಯನ್ ರೇಡಿಯೇಶನ್ ಪ್ರೊಟೆಕ್ಷನ್ ಮತ್ತು ನ್ಯೂಕ್ಲಿಯರ್ ಸೇಫ್ಟಿ ಏಜೆನ್ಸಿ (ARPANSA) ಈ ಸಂಶೋಧನೆ ನಡೆಸಿದೆ. ಈ ಸಂಸ್ಥೆಯು ಸಮಗ್ರ ಅಧ್ಯಯನ ಕೈಗೊಂಡಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಡೇಟಾ ವಿಶ್ಲೇಷಣೆ ಮಾಡಲಾಗಿದೆ. ಇದರೊಂದಿಗೆ ಮೊಬೈಲ್ ಫೋನ್ ಬಳಕೆಗೂ ಬ್ರೈನ್ ಕ್ಯಾನ್ಸರ್ಗೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಲಾಗಿದೆ. ಸುಮಾರು 5 ಸಾವಿರ ಅಧ್ಯಯನಗಳನ್ನು ವಿಶ್ಲೇಷಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಕಳೆದ ಎರಡು ದಶಕಗಳಲ್ಲಿ ವೈರ್‌ಲೆಸ್ ತಂತ್ರಜ್ಞಾನವು ವೇಗವಾಗಿ ಹೆಚ್ಚಿದೆ. ಆದರೆ, ಮೆದುಳಿನ ಕ್ಯಾನ್ಸರ್ ಪ್ರಕರಣಗಳು ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ಅಧ್ಯಯನ ತಿಳಿಸಿದೆ.
ಈ ಹಿಂದಿನ IARC ಅಧ್ಯಯನ ಏನು ಹೇಳುತ್ತೆ?:2011ರ ಮೇ ತಿಂಗಳಿನಲ್ಲಿ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಒಂದು ಅಧ್ಯಯನವನ್ನು ಪ್ರಕಟಿಸಿತು. ಇದರಲ್ಲಿ ರೇಡಿಯೋ ತರಂಗಗಳಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಮಿದುಳಿನ ಕ್ಯಾನ್ಸರ್‌ಗೆ ಕಾರಣವಾಗಿರುವ ಗ್ಲಿಯೋಮಾ ಟ್ಯೂಮರ್‌ಗಳು ವೈರ್‌ಲೆಸ್ ಫೋನ್ ಬಳಕೆಯಿಂದ ಉಂಟಾಗಬಹುದು ಎಂದೂ ಹೇಳಲಾಗಿತ್ತು. ಈ ಸಂಶೋಧನೆಯ ಪುರಾವೆಗಳು ಸೀಮಿತವಾಗಿದ್ದವು. ಈ ಅಧ್ಯಯನವನ್ನು ಸೀಮಿತ ಮಾಹಿತಿಯೊಂದಿಗೆ ಪ್ರಕಟಿಸಲಾಗಿತ್ತು.