ಹೈದರಾಬಾದ್: ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮವನ್ನು ಹೊಂದಿದೆ ಎಂಬುದಾಗಿ ಸಂಸ್ಥೆ ಕೋರ್ಟ್ನಲ್ಲಿ ಮೊದಲ ಬಾರಿಗೆ ತಿಳಿಸಿದೆ. ಈ ಒಪ್ಪಿಗೆಯೂ ಹಲವು ಮಿಲಿಯನ್ ಪೌಂಡ್ಗಳ ಕಾನೂನು ಪರಿಹಾರಕ್ಕೆ ಕೂಡ ದಾರಿ ಮಾಡಬಹುದು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಟೆಲಿಗ್ರಾಫ್ ವರದಿ ಮಾಡಿದಂತೆ, ಫೆಬ್ರವರಿಯಲ್ಲಿ ಆಸ್ಟ್ರಾಜೆನಕಾ ಕೋರ್ಟ್ ಮುಂದೆ ಹಾಜರುಪಡಿಸಿದ ಕಾನೂನು ದಾಖಲಾತಿಯಲ್ಲಿ ತಮ್ಮ ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.
ಏನಿದು ಪ್ರಕರಣ: 2020ರಲ್ಲಿ ಕೊರೊನಾ ವೈರಸ್ ಉಲ್ಬಣಿಸಿದಾಗ ಈ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಆಕ್ಸಫರ್ಡ್ ಜೊತೆಗೂಡಿ ಆಸ್ಟ್ರಾಜೆನೆಕಾ ಎಜೆಡ್ಡಿ1222 ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿತು. ಈ ಲಸಿಕೆಯಿಂದ ಸಾವು, ಗಂಭೀರ ಗಾಯದ ಸಮಸ್ಯೆಗಳು, ಟಿಟಿಎಸ್ ಎಂದರೆ ರಕ್ತ ಹೆಪ್ಪುಗಟ್ಟುವಿಕೆ ಹಾಗು ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಟ್ರಾಜೆನಕಾ ವಿರುದ್ಧ ಕಾನೂನು ಕ್ರಮಕ್ಕೆ ದೂರು ಸಲ್ಲಿಸಲಾಗಿತ್ತು.
ಜೇಮಿ ಸ್ಕ್ರಾಟ್ ಎಂಬ ವ್ಯಕ್ತಿಯೊಬ್ಬರು 2021ರ ಏಪ್ರಿಲ್ನಲ್ಲಿ ಈ ಲಸಿಕೆ ಪಡೆದ ಬಳಿಕ ಅವರ ರಕ್ತ ಹೆಪ್ಪುಗಟ್ಟಿ ಅವರು ಶಾಶ್ವರ ಮೆದುಳಿನ ಗಾಯಕ್ಕೆ ಗುರಿಯಾದರು. ಇದರಿಂದ ಅವರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು. ಅವರ ಹೆಂಡತಿ ಕೂಡ ಮೂರು ಲಸಿಕೆ ಪಡೆದ ಬಳಿಕ ಅವರು ಸಾವಿನ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದೆ.
ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಅವರು ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಕಾ, ಎಜೆಡ್ ಲಸಿಕೆಯು ಅಪರೂಪದ ಪ್ರಕರಣದಲ್ಲಿ ಟಿಟಿಎಸ್ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಒಪ್ಪಿಕೊಂಡಿದೆ.