ಸಿಯೋಲ್(ದಕ್ಷಿಣ ಕೊರಿಯಾ):ನಮ್ಮಮಕ್ಕಳು ಚೆನ್ನಾಗಿ ಓದುವುದಿಲ್ಲ ಎಂಬ ದೂರು ಸಾಮಾನ್ಯವಾಗಿ ಪೋಷಕರಿಂದ ಕೇಳಿಬರುತ್ತದೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಪರಿಸ್ಥಿತಿ ವಿಭಿನ್ನ. ಈ ದೇಶದಲ್ಲಿ ಮಕ್ಕಳು ಹೆಚ್ಚು ಓದುತ್ತಿರುವುದೇ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಈ ಸಂಗತಿ ಅಚ್ಚರಿಯಾದರೂ ಹೌದು. ದಕ್ಷಿಣ ಕೊರಿಯಾದ ಶಾಲೆಗಳಲ್ಲಿ ಪ್ರತಿ 10ರ ಪೈಕಿ 6 ಮಕ್ಕಳು ತಮಗೆ ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಓದಿನಲ್ಲೇ ಕಳೆಯುತ್ತಿದ್ದಾರಂತೆ. ಇದರಿಂದೇನು ತೊಂದರೆ ಅಂದ್ರಾ? ಮುಂದೆ ಓದಿ.
ಕೊರಿಯಾದ ಚಿಲ್ಡ್ರನ್ ವೆಲ್ಫೇರ್ ಫೌಂಡೇಷನ್ ಎಂಬ ಸಂಸ್ಥೆ ಒಂದು ಸಮೀಕ್ಷೆ ನಡೆಸಿದೆ. ಚೈಲ್ಡ್ಫಂಡ್ ಕೊರಿಯಾದಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ. ಈ ಅಧ್ಯಯನಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಹಂತದವರೆಗೆ 10,140 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಶೇ.65.1ರಷ್ಟು ಮಕ್ಕಳು ಓದಿಗಾಗಿ ತಮಗೆ ಸೂಚಿರುವುದಕ್ಕಿಂತ ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಶೇ.13ರಷ್ಟು ಮಧ್ಯಮ ಮತ್ತು ಹೈಸ್ಕೂಲ್ ಮಕ್ಕಳು ಅತಿ ಹೆಚ್ಚು ಎನ್ನುವಂತೆ ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಗೊತ್ತಾಗಿದೆ.
ಸಮೀಕ್ಷೆ ತೋರಿಸುವಂತೆ, ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಎರಡು ಗಂಟೆ 17 ನಿಮಿಷ ಓದುತ್ತಿದ್ದರೆ, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 2 ಗಂಟೆ 47 ನಿಮಿಷ ಓದಿನಲ್ಲಿ ಮಗ್ನರಾಗುತ್ತಾರೆ. ಮಧ್ಯಮ ಮತ್ತು ಹೈಸ್ಕೂಲ್ ಶಾಲೆಗಳ ಮಕ್ಕಳು ಕ್ರಮವಾಗಿ ಮೂರು ಗಂಟೆ 12 ನಿಮಿಷ ಮತ್ತು ಮೂರು ಗಂಟೆ 22 ನಿಮಿಷ ಓದಿನಲ್ಲಿ ನಿರತರಾಗಿದ್ದಾರೆ. ಮಕ್ಕಳ ಈ ರೀತಿಯ ಅಧಿಕ ಓದಿನಿಂದಾಗಿ ಶಿಫಾರಸು ಮಾಡಿರುವ ನಿದ್ರಾ ಅವಧಿಗಿಂತ ಶೇ.18.8ರಷ್ಟು ಮಕ್ಕಳು ಕಡಿಮೆ ಅವಧಿಯಲ್ಲಿ ನಿದ್ರೆ ಮಾಡಿರುವುದು ಕಂಡುಬಂದಿದೆ.