ಈ ವರ್ಷದ ಬಹು ನಿರೀಕ್ಷಿತ ಸ್ಯಾಂಡಲ್ವುಡ್ ಸಿನಿಮಾಗಳಲ್ಲೊಂದಾಗಿರುವ "ಯುವ" ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ದೊಡ್ಮನೆಯ ಕುಡಿ ಯುವ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ಇದಾಗಿದ್ದು, ಟ್ರೈಲರ್ ನಿಂದಲೇ ಚಂದನವನದಲ್ಲಿ ಬಹುದೊಡ್ಡ ಸಕ್ಸಸ್ ತಂದು ಕೊಡುವ ಸೂಚನೆ ಸಿಕ್ಕಿದೆ.
ನಾಳೆಯಿಂದ ಚಿತ್ರಮಂದಿರಗಳಲ್ಲಿ "ಯುವ" ದರ್ಬಾರ್ ಪ್ರಾರಂಭಗೊಳ್ಳಲಿದೆ. ಈಗಾಗಲೇ ಸಿನಿರಸಿಕರು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆಯೇ ನಟ ಯುವ ರಾಜ್‌ಕುಮಾರ್ ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ತಮ್ಮ ಸಿನಿ ಜರ್ನಿ ಮತ್ತು ಯುವ ಚಿತ್ರದ ಬಗೆಗಿನ ಕೆಲ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಬಾಲ್ಯದ ಬಗ್ಗೆ ಯುವ ಮಾತು:ಯುವರಾಜ್ಗೆ ಚಿಕ್ಕ ವಯಸ್ಸಿನಲ್ಲೇ ಮನದಲ್ಲಿ ನಟನೆಯ ಬೀಜ ಚಿಗುರೊಡೆದಿತ್ತು. ತಮ್ಮ ಶಾಲಾ ದಿನಗಳಲ್ಲೇ ಸಣ್ಣಪುಟ್ಟ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ ಅವರು ಮನೆಯಲ್ಲೂ ಆ್ಯಕ್ಟಿಂಗ್ನ ಅಭ್ಯಾಸ ಮಾಡುತ್ತಿದ್ದರಂತೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯವೆಂದರೆ ಪ್ರತಿಯೊಬ್ಬರಿಗೂ ಸಿನಿಮಾ ನೋಡಿ ನಟನಾಗಬೇಕು ಎಂದು ಬಯಸಿದರೇ ಯುವರಾಜ್ ಮಾತ್ರ ಡಿಫರೆಂಟ್. ಇವರು ಶೂಟಿಂಗ್ ನೋಡಿ ನಟನಾಗುವ ಆಸೆ ಬೆಳಸಿಕೊಂಡಿದ್ದಾರಂತೆ, ಜತೆಗೆ ತಾತ, ಅಪ್ಪ, ದೊಡ್ಡಪ್ಪ ಮತ್ತು ಚಿಕ್ಕಪ್ಪ ಅವರ ಸ್ಪೂರ್ತಿಯಿಂದ ಇಂಡಸ್ಟ್ರಿಗೆ ಬರಬೇಕು ಅಂತಾ ಡಿಸೈಡ್ ಮಾಡಿದ್ದರಂತೆ.
ಚಿತ್ರದ ಬಗ್ಗೆ ಯುವರಾಜ್ ಮಾತು:ಯುವ ಚಿತ್ರದ ಮೊದಲದಿನದ ಮೊದಲ ಶೂಟ್ ಅನುಭವದ ಬಗ್ಗೆ ಬಿಚ್ಚಿಟ್ಟ ಅವರು, ಫೈಟಿಂಗ್ನಿಂದಲೇ ಚಿತ್ರದ ಶೂಟ್ ಆರಂಭವಾಗಿದೆಯಂತೆ. ಅದರಲ್ಲೂ ಆ್ಯಕ್ಷನ್ ಸೀನ್ನಲ್ಲಿ ಚೇಸ್ ಮಾಡುವ ಸೀನ್ ಮರೆಯೋದಿಕ್ಕೆ ಆಗೋಲ್ಲ ಎಂದು ಹೇಳಿದ್ದಾರೆ. ಟ್ರೈಲರ್ನಲ್ಲಿ ಕಾರು ಗ್ಲಾಸ್ ಹೊಡೆಯೋ ಆ್ಯಕ್ಷನ್ ಸಿಕ್ವೇನ್ಸ್ ನನ್ನ ಡ್ರೀಮ್ ಆಗಿತ್ತು. ನಾನು ಶಿವಣ್ಣ ದೊಡ್ಡಪ್ಪ ತರ, ಅಪ್ಪು ಚಿಕ್ಕಪ್ಪ ತರ ಕಾರಿನ ಗ್ಲಾಸ್ ಹೊಡೆಯೋ ಸ್ಟಂಟ್ ಮಾಡಬೇಕು ಅಂತಾ ಅಂದುಕೊಂಡಿದ್ದೆ, ಆದರೆ ನನಗೆ ನನ್ನ ಮೊದಲ ಸಿನಿಮಾದಲ್ಲೆ ಈ ಚಾನ್ಸ್ ಸಿಗುತ್ತೆ ಅಂತಾ ಅಂದುಕೊಂಡಿರಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.
ನನ್ನ ಆಸೆ ಮೊದಲ ಚಿತ್ರದಲ್ಲೇ ಈಡೇರಿಸಿದ ನಿರ್ದೇಶಕ ಸಂತೋಷ್ ಅವರಿಗೆ ಥ್ಯಾಂಕ್ ಯು ಹೇಳಬೇಕು. ನಮ್ಮ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಬಗ್ಗೆ ಹೇಳೋದು ಆದ್ರೆ ಮೂರು ಹಿಟ್ ಚಿತ್ರಗಳನ್ನ ಕೊಟ್ಟಿರುವ ಅವರು ನನಗೆ ಬಹಳ ಕಲಿಸಿಕೊಟ್ಟಿದ್ದಾರೆ. ಆ್ಯಕ್ಷನ್ ಮಾಡಬೇಕಾದ್ರೆ, ಅಭಿನಯದಲ್ಲಿ ಎಮೋಷನ್ ಹೇಗೆ ಮಾಡಬೇಕು, ಡಬ್ಬಿಂಗ್ ಹೇಗೆ ಮಾಡಬೇಕು ಅಂತಾ ಅವರಿಂದ ಸಾಕಷ್ಟು ಕಲಿತಿದ್ದೇನೆ. ಸಂತೋಷ್ ಸಾರ್ ಶೂಟಿಂಗ್ ಸ್ಪಾಟ್ನಲ್ಲಿ ಕಾಮಿಡಿ ಮಾಡ್ತಾ ಸಖತ್ತಾಗೇ ಕೆಲಸ ಮಾಡ್ತಾ ಇದ್ದರು. ಅದು ನನಗೆ ತುಂಬಾ ಇಷ್ಟ ಆಯಿತು. ಅವಕಾಶ ಸಿಕ್ಕರೆ ಮತ್ತೆ ಸಂತೋಷ್ ಅವರ ಜೊತೆ ಸಿನಿಮಾ ಮಾಡ್ತೇನಿ ಎಂದು ಹೇಳಿದ್ದಾರೆ.
ಇನ್ನು ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಅವರಿಂದ ಸಾಕಷ್ಟು ಕಲಿತುಕೊಂಡೆ. ಕಿಶೋರ್ ಅಷ್ಟು ದೊಡ್ಡ ಸ್ಟಾರ್ ಆದರೂ ಕೂಡ ಸಮಯ ಸಿಕ್ಕಾಗ ಶೂಟಿಂಗ್ ಸ್ಪಾಟ್ನಲ್ಲಿ ಪುಸ್ತಕ ಓದುತ್ತಿರುತ್ತಾರೆ, ಅದು ನನಗೆ ಇಷ್ಟ ಆಯಿತು. ಜೊತೆಗೆ ಸಪ್ತಮಿ ಗೌಡ ಬಗ್ಗೆ ಹೇಳಲೇಬೇಕು. ಸಪ್ತಮಿ ಅವರೊಂದಿಗೆ ಒಳ್ಳೆ ಫ್ರೆಂಡ್ ಶಿಪ್ ಇದೆ. ಈ ಕಾರಣಕ್ಕೆ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ಬಂದಿದೆ. ನಾನು ಡಾ ರಾಜ್ ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಗನಾದರೂ ನನಗೆ ಆ್ಯಕ್ಟಿಂಗ್ ಬರುತ್ತೆ ಎಂಬ ಆತ್ಮವಿಶ್ವಾಸ ಮೂಡಿದ್ದು, ಯುವ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರ ಜೊತೆ ನಟಿಸುವಾಗ. ಆಗ ನಾನೂ ಅಭಿನಯ ಮಾಡ್ತೇನಿ ಅಂತಾ ಅನಿಸಿತ್ತು.
ನನಗೆ ದೊಡ್ಡಪ್ಪ ಹಾಗೂ ನನ್ನ ಅಣ್ಣನ ಜೊತೆ ಆ್ಯಕ್ಟ್ ಮಾಡಬೇಕು ಎಂಬ ಆಸೆ ಇದೆ. ಯಾರಾದರು ಡೈರೆಕ್ಟರ್ ನಮಗೆ ಹೊಂದಿಕೆಯಾಗು ಕಥೆ ಮಾಡಿಕೊಂಡು ಬಂದರೆ ನಿಜವಾಗ್ಲೂ ನಾನು ಅಭಿನಯಿಸುತ್ತೇನೆ. ಪುನೀತ್ ಅಗಲಿಕೆ ಬಳಿಕ ನಿಮ್ಮನ್ನ ಅಪ್ಪು ಸ್ಥಾನದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಯುವರಾಜ್ ನಮ್ಮ ಚಿಕ್ಕಪ್ಪನ ಸ್ಥಾನ ತುಂಬೋಧಕ್ಕೆ ಯಾರಿಂದಲು ಸಾಧ್ಯವಿಲ್ಲ. ಯಾಕಂದ್ರೆ ಹೆಸರಿಗೆ ತಕ್ಕಂತೆ ಪವರ್ ಫುಲ್ ಆಗಿ ಬದುಕಿದವರು ಎಂದಿದ್ದಾರೆ.
ಅಭಿಮಾನಿಗಳು ನಿಮ್ಮನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಯುತ್ತಿದ್ದಾರೆ. ಅದಕ್ಕೆ ನಿಮ್ಮ ಉತ್ತರ ಏನು ಎಂಬ ಪ್ರಶ್ನೆಗೆ ಯುವ ಹೇಳಿದ್ದು, ಮೊದಲು ನಮ್ಮ ಚಿಕ್ಕಪ್ಪ ಆಮೇಲೆ ನಾನು. ಅಭಿಮಾನಿಗಳ ಪ್ರೀತಿ ಗೌರವಕ್ಕೆ ಬೆಲೆ ಕಟ್ಟೋದಕ್ಕೆ ಆಗೋಲ್ಲ ಎಂದಿದ್ದಾರೆ.
ಇದನ್ನೂ ಓದಿ:ವಿಕ್ರಮ್ ರವಿಚಂದ್ರನ್ ಮುಧೋಳ್ ಚಿತ್ರಕ್ಕೆ ಸಿಕ್ಕಳು ಸಲಗ ಸುಂದರಿ - actress Sanjana Anand