'ಯುವ', ಈ ವರ್ಷದ ಬಹುನಿರೀಕ್ಷಿತ ಸ್ಯಾಂಡಲ್ವುಡ್ ಸಿನಿಮಾಗಳಲ್ಲೊಂದು. ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ವೀಕ್ಷಿಸಲು ಸಿನಿಪ್ರಿಯರು ಕಾತುರರಾಗಿದ್ದಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್, ಟ್ರೇಲರ್, ಸಾಂಗ್ಸ್ ಸ್ವೀಕರಿಸಿರುವ ಸ್ಪಂದನೆ ನೋಡಿದ್ರೆ ಸಿನಿಮಾ ಗೆಲ್ಲೋದ್ರಲ್ಲಿ ಸಂದೇಹವೇ ಇಲ್ಲ ಅಂತಿದ್ದಾರೆ ಅಭಿಮಾನಿಗಳು. ರಾಘವೇಂದ್ರ ರಾಜ್‌ಕುಮಾರ್ ಕಿರಿಮಗನ ಚೊಚ್ಚಲ ಚಿತ್ರವಾಗಿರೋ ಹಿನ್ನೆಲೆ ಭಾರಿ ಕುತೂಹಲ ಮೂಡಿದೆ.
ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಬಹು ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಚಿತ್ರತಂಡವಿನ್ನೂ ಚಿಂತನೆ ನಡೆಸಿಲ್ಲ. ಒಂದು ವೇಳೆ ಸಿನಿಮಾ ಡಬ್ ಮಾಡಿಕೊಡುವಂತೆ ಬೇರೆ ಭಾಷೆಗಳಿಂದ ಬೇಡಿಕೆ ಬಂದರೆ ಆ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯೂ ಇದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಹಾಗೂ ಡೆಲಿವರಿ ಬಾಯ್ ಆಗಿ ಎರಡು ಶೇಡ್‌ಗಳಲ್ಲಿ ಯುವ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಥಿಯೇಟರ್‌ಗಳ ಎದುರು ಯುವ ಕಟೌಟ್‌ಗಳು ರಾರಾಜಿಸುತ್ತಿವೆ. ಅದ್ಧೂರಿಯಾಗಿ ಅಣ್ಣಾವ್ರ ಮೊಮ್ಮಗನನ್ನು ಸ್ವಾಗತಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕೂಡ ಇಂದು ಓಪನ್ ಆಗಿದೆ.