2024 ಕೊನೆಗೊಳ್ಳುತ್ತಿದೆ. ಈ ವರ್ಷ ಚಿತ್ರರಂಗ ಮತ್ತು ಪ್ರೇಕ್ಷಕರ ಅಭಿಪ್ರಾಯವನ್ನು ಮೆಲುಕು ಹಾಕುವ ಸಮಯ ಬಂದಿದೆ. ಕೇವಲ ಅದ್ಧೂರಿ ಪ್ರಚಾರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಖಾತರಿಪಡಿಸದು ಎಂಬುದು ಸಾಬೀತಾಗಿದೆ. ಸ್ಟಾರ್ ಪವರ್, ಬಿಗ್ ಬಜೆಟ್ ಮತ್ತು ಪ್ಯಾನ್-ಇಂಡಿಯನ್ ಟ್ರೆಂಡುಗಳ ಹೊರತಾಗಿಯೂ ಪ್ರೇಕ್ಷಕರು ಹೆಚ್ಚು ವಿವೇಚನಾಶೀಲರಾಗಿದ್ದಾರೆ ಅವರು ಹೆಚ್ಚಿನದ್ದನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಈ ವರ್ಷ ಸಾಬೀತುಪಡಿಸಿದೆ. ಪ್ರೇಕ್ಷಕರು ಕೇವಲ ಬಿಗ್ ಬಜೆಟ್, ಜನಪ್ರಿಯ ನಟರು ಅಥವಾ ಅದ್ಧೂರಿ ಪ್ರಚಾರಗಳಿಗೆ ಮಾರುಹೋಗುವುದಿಲ್ಲ. ಒಂದೊಳ್ಳೆ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ತಮ್ಮ ಭರವಸೆಗಳನ್ನು ಪೂರೈಸಲು ವಿಫಲವಾದ ಸಿನಿಮಾಗಳನ್ನು ಹಿಂದು ಮುಂದು ನೋಡದೇ ತಿರಸ್ಕರಿಸಿದ್ದಾರೆ.
ಸೂಪರ್ ಸ್ಟಾರ್ಸ್ ಮತ್ತು ವ್ಯಾಪಕ ಪ್ರಚಾರದ ಹೊರತಾಗಿಯೂ ಹಲವು ಬಿಗ್ ಬಜೆಟ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ದಾಖಲೆಗಳನ್ನು ಪುಡಿಗಟ್ಟಲಿವೆ ಎಂಬ ನಿರೀಕ್ಷೆಗಳಿದ್ದರೂ ಕೆಲ ಚಲನಚಿತ್ರಗಳು ದೊಡ್ಡ ಮಟ್ಟದ ಪ್ರಚಾರದ ಹೊರತಾಗಿಯೂ ಯಶಸ್ಸಿನ ಗ್ಯಾರಂಟಿ ಇಲ್ಲ ಎಂಬುದನ್ನು ಸಾಬೀತು ಮಾಡಿವೆ. ಬಹುನಿರೀಕ್ಷಿತ ಮಾರ್ಟಿನ್, ಇಂಡಿಯನ್ 2ನಿಂದ ಹಿಡಿದು ಸರ್ಫಿರಾ, ವೇದ, ಕ್ರಾಕ್, ಉಲಜ್, ಖೇಲ್ ಖೇಲ್ ಮೇ ಮತ್ತು ಔರಾನ್ ಮೇ ಕಹಾನ್ ದಮ್ ಥಾ ವರೆಗೆ ಈ ವರ್ಷದ ಅನೇಕ ಬಿಗ್ ಪ್ರಾಜೆಕ್ಟ್‌ಗಳಿಗೆ ಹಿನ್ನಡೆಯಾಗಿದೆ.
ಮಾರ್ಟಿನ್: ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಆಯಿತು. ಎ.ಪಿ.ಅರ್ಜುನ್ ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲೇ ಪ್ರಚಾರ ನಡೆಸಿತ್ತು. ಉದಯ್ ಕೆ.ಮೆಹ್ತಾ ನಿರ್ಮಾಣದ ಸಿನಿಮಾ ರಾಜ್ಯವಲ್ಲದೇ ಹೊರರಾಜ್ಯಗಳಲ್ಲೂ ಪ್ರಮೋಶನಲ್ ಈವೆಂಟ್ಗಳನ್ನು ನಡೆಸಿ ಗಮನ ಸೆಳೆದಿತ್ತು. ಸರಿಸುಮಾರು 100 ಕೋಟಿ ರೂ. ಬಜೆಟ್‌ನ ಚಿತ್ರ 25 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ22.72 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಅದ್ಧೂರಿ ಪ್ರಚಾರದ, ಗ್ರ್ಯಾಂಡ್ ರಿಲೀಸ್ ಹೊರತಾಗಿಯೂ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ.
ಕಂಗುವ: ಸೌತ್ ಸೂಪರ್ ಸ್ಟಾರ್ ಸೂರ್ಯ ಅವರ 'ಕಂಗುವ' ಈ ವರ್ಷದ ಮತ್ತೊಂದು ಬಿಗ್ ಬಜೆಟ್ ಡಿಸಾಸ್ಟರ್. 350 ಕೋಟಿ ರೂಪಾಯಿ ಬಜೆಟ್‌ನ ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿತ್ತು. ಫ್ಯಾಂಟಸಿ ಆ್ಯಕ್ಷನ್ ಡ್ರಾಮಾವಾಗಿ ಬಿಡುಗಡೆಗೊಂಡ ಕಂಗುವ, ಸೂರ್ಯ ಅವರ ಸೂಪರ್ ಸ್ಟಾರ್ಡಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸುವ ಭರವಸೆ ಹೊಂದಿತ್ತು. ಆದಾಗ್ಯೂ, ಬಾಕ್ಸ್ ಆಫೀಸ್ ಪ್ರಯಾಣ ಕಡಿಮೆ ಅಂಕಿಅಂಶಗಳೊಂದಿಗೆ ಪ್ರಾರಂಭವಾಯಿತು. ಕಥಾವಸ್ತು ಮತ್ತು ವಿಶುವಲ್ ಎಫೆಕ್ಟ್ಸ್ ನೆಗೆಟಿವ್ ವಿಮರ್ಶೆಯನ್ನು ಸ್ವೀಕರಿಸಿತು. ಅದ್ಧೂರಿ ಪ್ರಚಾರ ಮತ್ತು ಬಹುನಿರೀಕ್ಷೆಗಳ ಹೊರತಾಗಿಯೂ ಕಂಗುವ ಭಾರತದಲ್ಲಿ ಕೇವಲ 70 ಕೋಟಿ ರೂ. ಮತ್ತು ಜಾಗತಿಕವಾಗಿ 110 ಕೋಟಿ ರೂ.ಗೂ ಕಡಿಮೆ ಕಲೆಕ್ಷನ್ ಮಾಡಿತು.
ಇಂಡಿಯನ್ 2:ಎಸ್.ಶಂಕರ್ ನಿರ್ದೇಶನದ 'ಇಂಡಿಯನ್ 2' ಹಿನ್ನಡೆ ಕಂಡ ಬಿಗ್ ಬಜೆಟ್ ಚಿತ್ರಗಳಲ್ಲೊಂದು. ಕಮಲ್ ಹಾಸನ್ ಅವರ 1996ರ 'ಇಂಡಿಯನ್'ನ ಬಹುನಿರೀಕ್ಷಿತ ಸೀಕ್ವೆಲ್ ಇದಾಗಿದ್ದು, ಈ ವರ್ಷ ಸೋತ ಮತ್ತೊಂದು ಪ್ರಮುಖ ಸಿನಿಮಾ. ಹಲವು ವರ್ಷಗಳ ಕಾಲ ನಿರ್ಮಾಣ ಹಂತದಲ್ಲಿದ್ದ ಚಿತ್ರ ಹಲವು ಬಾರಿ ವಿಳಂಬ ಮತ್ತು ವಿವಾದಗಳನ್ನು ಎದುರಿಸಿದೆ. ಹೀಗೆ ಚಿತ್ರದ ಮೇಲಿನ ನಿರೀಕ್ಷೆ ಸಹ ಹೆಚ್ಚಾಗಿತ್ತು. ಸೇನಾಪತಿ ಪಾತ್ರದಲ್ಲಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಕಮಲ್ ಹಾಸನ್ ಮರಳಿದ ಹೊರತಾಗಿಯೂ, ಹಿಂದಿನ ಯಶಸ್ಸನ್ನು ಮುಂದುವರಿಸಲು ವಿಫಲವಾಯಿತು. 250 ಕೋಟಿ ರೂ ಬಜೆಟ್‌ನ ಬಿಗ್ ಪ್ರಾಜೆಕ್ಟ್ ಎಂದು ವರದಿಯಾದ ಈ ಚಿತ್ರ ದುರಾದೃಷ್ಟವಶಾತ್, ಜಾಗತಿಕವಾಗಿ 150 ಕೋಟಿ ರೂಪಾಯಿಗಳನ್ನಷ್ಟೇ ಕಲೆಕ್ಷನ್ ಮಾಡಿತು.