ಅಭಿನಯ ಹಾಗೂ ತಮ್ಮ ಲುಕ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಯಶ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ 'ಜಂಗಲ್ ಮಂಗಲ್'. ಈ ಚಿತ್ರಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಥ್ ನೀಡಿದ್ದಾರೆ. ಹೌದು, ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿ, ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದಾರೆ.
ಈವೆಂಟ್ನಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ನನ್ನ ಕೆಲ ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ಈ ಚಿತ್ರಕ್ಕೆ ನಿಮ್ಮ ಸಹಕಾರವಿರಬೇಕು ಎಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಏಕೆಂದರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಸಿಂಪಲ್ ಸುನಿ ತಿಳಿಸಿದರು.
ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್ ಮಾತನಾಡಿ, ಇದು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯ ಬಳಿಯ ಕಾಡಿನಲ್ಲೇ ನಡೆದಿದೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೂ ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆ. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು.
ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ ಎಂದು ಮಾತನಾಡಿದ ಯಶ್ ಶೆಟ್ಟಿ, ನಿರ್ದೇಶಕರ ಈ ಕಥೆ ಚೆನ್ನಾಗಿದೆ. ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡೂ ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು.