ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಗಳನ್ನು ಬಣ್ಣಿಸುವ, ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಸ್ತ್ರೀಯರು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ಕೂಡ ನಾಯಕರ ಮಧ್ಯೆ ಬೆಳೆಯುವ ಮೂಲಕ ಸ್ಟಾರ್ ನಟಿಯರಾಗಿ ಕೆಲವರು ತಮ್ಮದೇ ಛಾಪು ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳ ಮಧ್ಯೆ ಕೆಲ ನಟಿಮಣಿಯರು ತಮ್ಮದೇ ಬೇಡಿಕೆಯನ್ನ ಹೊಂದಿದ್ದಾರೆ. ಈಗಂತೂ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಹೊಸ ಹೊಸ ಹೀರೋಯಿನ್ಸ್ ಆಗಮನ ಹೆಚ್ಚುತ್ತಿದೆ. ಆದರೆ ಸ್ಟಾರ್ ಪಟ್ಟ ಉಳಿಸಿಕೊಂಡಿರುವ ಕೆಲವೇ ಕೆಲವು ನಟಿಯರಿದ್ದಾರೆ.
ಇವರಲ್ಲಿ ಪ್ರಮುಖರು ಎಂದರೆ ಬೆಂಗಾಳಿ ಮೂಲದ ನಟಿ ಪ್ರಿಯಾಂಕಾ ಉಪೇಂದ್ರ. ಮದುವೆ ಆಗಿ ಎರಡು ಮಕ್ಕಳ ತಾಯಿಯಾಗಿರುವ ಪ್ರಿಯಾಂಕ ಉಪೇಂದ್ರ, ಡಾ ವಿಷ್ಣುವರ್ಧನ್, ರವಿಚಂದ್ರನ್, ಉಪೇಂದ್ರ, ಶಿವರಾಜ್ ಕುಮಾರ್ ಅಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದು, ಇವತ್ತಿಗೂ ಬೇಡಿಕೆ ಹೊಂದಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನ ಮಾಡುತ್ತಿರುವ ಪ್ರಿಯಾಂಕಾ ಉಪೇಂದ್ರ ಇಂದಿಗೂ ಹೀರೋಗಳ ಹಂಗಿಲ್ಲದೇ ಏಕಾಂಗಿಯಾಗಿ ಸಿನಿಮಾ ಗೆಲ್ಲಿಸುವ ಸಾಮರ್ಥ್ಯವನ್ನ ಹೊಂದಿದ್ದಾರೆ.
ಇನ್ನು ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಕಡಿಮೆ ಸಮಯಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಲಕ್ಕಿ ಹೀರೋಯಿನ್.
ಕಿರುತೆರೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಆಗಿ ಮಿಂಚಿದ ನಟಿ ರಚಿತಾ ರಾಮ್. ಕನ್ನಡದ ಬಹುತೇಕ ಸ್ಟಾರ್ಗಳ ಜೊತೆ ಸ್ಕ್ರೀನ್ ಹಂಚಿಕೊಂಡು ಸ್ಟಾರ್ ಪಟ್ಟವನ್ನ ಅಲಂಕರಿಸಿದ್ದಾರೆ. ಕಡಿಮೆ ಸಮಯದಲ್ಲಿ ಸ್ಟಾರ್ ನಟರ ಚಿತ್ರಗಳಿಗೆ ನಾಯಕಿ ಆಗುವ ಮೂಲಕ ಕನ್ನಡಿಗರ ಸಿನಿ ಪ್ರಿಯರ ಮನಸ್ಸು ಕದ್ದ ಚೆಲುವೆ. ಇವತ್ತಿಗೂ ಡಿಂಪಲ್ ಕ್ವೀನ್ ರಚಿತಾ ರಾಮ್ಗೆ ಬಹು ದೊಡ್ಡ ಬೇಡಿಕೆ ಇದೆ.