ಜುಲೈ 30ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಭೂಕುಸಿತ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿವೆ. ಆ ಪ್ರದೇಶದಲ್ಲಿ ಮನೆಗಳಲ್ಲಿ ಮುಕ್ಕಾಲು ಭಾಗಕ್ಕೂ ಹೆಚ್ಚು ಮನೆಗಳು ಅವಶೇಷಗಳಡಿ ಹೂತು ಹೋಗಿವೆ. ಈ ದುರಂತದಲ್ಲಿ 174 ಜನ ಸಾವನ್ನಪ್ಪಿದರೆ, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರು ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದರೆ, ಇನ್ನೂ ಕೆಲವರು ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಘಟನೆ ಬೆನ್ನಲ್ಲೇ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ. ಇದಲ್ಲದೇ ಈ ದುರಂತ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಚಿತ್ರರಂಗದ ಗಣ್ಯರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕಾಲಿವುಡ್ ಸ್ಟಾರ್ಗಳಾದ ಕಮಲ ಹಾಸನ್ ಹಾಗೂ ವಿಜಯ್ ದಳಪತಿ ಅವರು ಮೊದಲನೇಯದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಕುಟುಂಬದವರನ್ನು ಕಳೆದುಕೊಂಡು ದುಃಖದಲ್ಲಿರುವವರಿಗೆ ಸಾಂತ್ವನ ಹೇಳಿದ್ದಾರೆ.
ವಿಜಯ್ ಹಾಗೂ ಕಮಲ್ ಹಾಸನ್ ಅವರು ದುರಂತದ ಬಗ್ಗೆ ತೀವ್ರ ಕಳವಳವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ವಯನಾಡ್ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಇವರು, ಸಾವ್ನಪ್ಪಿದವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಕಮಲ್ ಹಾಸನ್ ಅವರು ತಮಿಳಿನಲ್ಲಿ ಪೋಸ್ಟ್ ಮಾಡಿದ್ದರೆ, ವಿಜಯ್ ಅವರು ಇಂಗ್ಲಿಷ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಜಯ್ ದಳಪತಿ, "ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದ ದುರಂತ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಾಂತ್ವನ. ಭೂಕುಸಿತದ ಸಂತ್ರಸ್ತರಿಗೆ ಅಗತ್ಯ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಒದಗಿಸುವಂತೆ ಸರ್ಕಾರದ ಅಧಿಕಾರಿಗಳಿಗೆ ವಿನಂತಿಸುತ್ತೇನೆ" ಎಂದು ಬರೆದಿದ್ದಾರೆ.
ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ ಕಮಲ್: ಇಂಡಿಯನ್ 2 ನಟ ಕಮಲ ಹಾಸನ್ ಎಕ್ಸ್ ಪೋಸ್ಟ್ನಲ್ಲಿ, "ಕೇರಳದ ವಯನಾಡ್ ಮತ್ತು ವಾಲ್ಪಾರೈನಲ್ಲಿ ಭೂಕುಸಿತದಿಂದ ಉಂಟಾದ ವಿಪತ್ತುಗಳ ಬಗ್ಗೆ ನನ್ನ ಹೃದಯ ಮಿಡಿಯುತ್ತದೆ. ತಮ್ಮ ಪ್ರೀತಿಪಾತ್ರರು, ಮನೆಗಳು ಮತ್ತು ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಹವಾಮಾನ ಬದಲಾವಣೆಯಿಂದಾಗಿ ನೈಸರ್ಗಿಕ ವಿಕೋಪಗಳು ಸಾಮಾನ್ಯ ಸಂಗತಿಯಾಗಿವೆ. ಇದರ ಪ್ರಭಾವವನ್ನು ಅರ್ಥಮಾಡಿಕೊಂಡು ನಾವು ಎಲ್ಲರೂ ಕೂಡಿ ಕೆಲಸ ಮಾಡುವುದು ಬಹಳ ಅವಶ್ಯಕ. ಇಂತಹ ಆಪತ್ತು ತುಂಬಿರುವ ಸನ್ನಿವೇಶದಲ್ಲಿ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾಪಡೆಯವರಿಗೆ, ರಾಜ್ಯ ಸರ್ಕಾರಗಳ ಸಿಬ್ಬಂದಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ರಕ್ಷಣಾ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತೇನೆ" ಎಂದು ಹಂಚಿಕೊಂಡಿದ್ದಾರೆ.