ಹಿರಿಯ ನಟ ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ 'ಭೈರತಿ ರಣಗಲ್' ಡಿಜಿಟಲ್ಗೆ ಎಂಟ್ರಿ ಕೊಟ್ಟಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ನಂತರ, ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಓಟಿಟಿಗೆ ಬಂದಿದೆ. ಡಿಸೆಂಬರ್ 25ರಿಂದ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಶುರು ಮಾಡಿದೆ. ಓಟಿಟಿ ಬಿಡುಗಡೆ ಕುರಿತಾಗಿ ಸಿನಿಮಾ ನಿರ್ಮಿಸಿರುವ ಗೀತಾ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
ನವೆಂಬರ್ 15, 2024ರಂದು ಭೈರತಿ ರಣಗಲ್ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿತ್ತು. ಬಿಡುಗಡೆಯಾದ ಕೇವಲ 45 ದಿನಗಳಲ್ಲಿ ಚಿತ್ರ ಓಟಿಟಿ ಪ್ರವೇಶಿಸಿದೆ.
ನರ್ತನ್ ಆ್ಯಕ್ಷನ್ ಕಟ್ ಹೇಳಿದ್ದ 'ಭೈರತಿ ರಣಗಲ್' ವಕೀಲ ಭೈರತಿ ರಣಗಲ್ ಅವರ ಕಥೆ ಹೇಳಿದೆ. ನಿರೂಪಣಾ ಶೈಲಿ, ಪವರ್ಫುಲ್ ಪರ್ಫಾಮೆನ್ಸ್ ನಿಂದ ಚಿತ್ರ ವ್ಯಾಪಕವಾಗಿ ಪ್ರಶಂಸೆ ಗಳಿಸಿತ್ತು. ಕಾನೂನು ಮತ್ತು ಅಪರಾಧದ ನಡುವೆ ಸಿಲುಕಿರುವ ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಹೋರಾಟಗಳನ್ನು ಸೆರೆಹಿಡಿಯುವ ರಣಗಲ್ ಪಾತ್ರ ನಿರ್ವಹಿಸುವ ಶಿವರಾಜ್‌ಕುಮಾರ್ ನಟನೆಗೆ ವ್ಯಾಪಕ ಮೆಚ್ಚುಗೆ ಗಳಿಸಿದೆ.
ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಛಾಯಾ ಸಿಂಗ್ ಮತ್ತು ಶಬೀರ್ ಕಲ್ಲರಕ್ಕಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೇವನಹಳ್ಳಿ, ಮೈಸೂರು, ಬಳ್ಳಾರಿ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗಿತ್ತು. ರವಿ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಭಾವನಾತ್ಮಕ ದೃಶ್ಯಗಳ ತೂಕ ಹೆಚ್ಚಿಸಿದೆ.