ಇತ್ತಿಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‌ವುಡ್ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಖುಷಿಪಟ್ಟಿದ್ದಾರೆ. ಮುರ್ಡೇಶ್ವರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವ ಮೀನುಗಾರಿಕೆ ದಿನಾಚರಣೆಯ ಕೊನೆಯ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಡಾಲಿ, ಜಗತ್ ಪ್ರಸಿದ್ಧವಾಗಿರುವ ರಾಜ್ಯದ ಏಕೈಕ ಸ್ಕೂಬಾ ಡೈವಿಂಗ್ ತಾಣದ ಸೌಂದರ್ಯ ಆಸ್ವಾದಿಸಿದರು.
ಮುರ್ಡೇಶ್ವರ ಕಡಲತೀರದಿಂದ ಇಲ್ಲಿನ ಅಕ್ವಾ ರೈಡ್ ಕಂಪನಿಯ ಬೋಟ್ ಮೂಲಕ ತಮ್ಮ ಸ್ನೇಹಿತರೊಂದಿಗೆ ತೆರಳಿ, ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಂಡರು. ನೇತ್ರಾಣಿ ದ್ವೀಪದ ಆಳ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿ, ಸಮುದ್ರದ ಜೀವವೈವಿಧ್ಯವನ್ನು ಹತ್ತಿರದಿಂದ ನೋಡಿ ಆನಂದಿಸಿದರು.
ನೀರಿನಾಳದಲ್ಲಿ 45 ನಿಮಿಷ: ಸುಮಾರು 45 ನಿಮಿಷಗಳ ಕಾಲ ನೀರಿನಾಳದಲ್ಲಿ ಕಾಲ ಕಳೆದಿದ್ದು, ಇನ್ನೂ ಒಂದು ತಾಸು ನೀರಿನನೊಳಗಿರುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೇ ಮುಂದಿನ ಕೆಲ ದಿನಗಳಲ್ಲಿ ಮತ್ತೆ ಸ್ಕೂಬಾ ಡೈವಿಂಗ್ಗಾಗಿ ಬರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ತಂಡದೊಂದಿಗೆ, ಪ್ರವಾಸಿಗರ ಕಾಳಜಿ ತೆಗೆದುಕೊಂಡು ಸ್ಕೂಬಾ ಡೈವಿಂಗ್ ಮಾಡಿಸುತ್ತಿರುವ ಅಕ್ವಾ ರೈಡ್ ಕಂಪನಿಯ ಮುಖ್ಯಸ್ಥರಿಗೆ, ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.
2025ರ ಫೆಬ್ರುವರಿ 16ಕ್ಕೆ ಮದುವೆ:ಡಾಲಿ ಧನಂಜಯ್ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ನೇಹಿತೆ, ವೈದ್ಯೆ ಧನ್ಯತಾ ಅವರೊಂದಿಗೆ ಹುಟ್ಟೂರು ಅರಸೀಕೆರೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2025ರ ಫೆಬ್ರುವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.