ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಕಂಟೆಂಟ್ ಚಿತ್ರಗಳು ಬಂದರೆ, ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಅನ್ನೋದಿಕ್ಕೆ ಒಂದು ತಾಜಾ ಉದಾಹರಣೆ ದಿಗಂತ್ ಹಾಗು ಧನ್ಯಾ ರಾಮ್ ಕುಮಾರ್ ಅಭಿನಯದ ಪೌಡರ್ ಸಿನಿಮಾ. ಈ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ಧನ್ಯಾ ರಾಮ್ ಕುಮಾರ್ ಅವರು ಪೆಪೆ ಸಿನಿಮಾದ ಹೀರೋ ವಿನಯ್ ರಾಜ್ ಕುಮಾರ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ.
ಪೆಪೆ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಚಿತ್ರ. ಟ್ರೈಲರ್ನಿಂದಲೇ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಪೆಪೆ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ದೊಡ್ಮನೆ ಮಕ್ಕಳಾದ ವಿನಯ್ ರಾಜ್ಕುಮಾರ್ ಹಾಗು ಧನ್ಯಾ ರಾಮ್ ಕುಮಾರ್ ತಾತ ರಾಜ್ಕುಮಾರ್ ಅವರಿಗೆ ಇಷ್ಟವಾದ ಮೆಜೆಸ್ಟಿಕ್ನಲ್ಲಿರುವ ನವಯುಗ ಹೋಟೆಲ್ನಲ್ಲಿ ಬಿರಿಯಾನಿ ಊಟ ಸವಿಯುತ್ತಾ ಇಬ್ಬರ ಸಿನಿಮಾಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಪೆಪೆ ಸಿನಿಮಾದಲ್ಲಿ ನಿನ್ನ ಲುಕ್ ಹಾಗು ಪಂಚೆಯಲ್ಲಿ ನೋಡಿದ್ರೆ ಸಖತ್ ಇಂಟ್ರಸ್ಟ್ರಿಂಗ್ ಆಗಿದೆ. ಯಾವ ತರಹದ ಪಾತ್ರ? ಅನ್ನೋ ಧನ್ಯಾ ರಾಮ್ಕುಮಾರ್ ಪ್ರಶ್ನೆಗೆ ಉತ್ತರಿಸಿದ ವಿನಯ್ ರಾಜ್ಕುಮಾರ್, "ಪೆಪೆ ನಾನು ಇಷ್ಟಪಟ್ಟು ಮಾಡಿದ ಪಾತ್ರ. ಪೆಪೆ ಅನ್ನೋದು ನನ್ನ ಹೆಸರು. ನನ್ನದು ತುಂಬಾ ತಾಳ್ಮೆ ಹಾಗು ವೈಲೆಂಟ್ ಆಗಿರುವ ಪಾತ್ರ. ಈ ಚಿತ್ರದಲ್ಲಿ ಸಣ್ಣ ವಿಷ್ಯಕ್ಕೆಲ್ಲ ಆ ಪಾತ್ರ ತಲೆಕೆಡಿಸಿಕೊಳ್ಳಲ್ಲ. ಆದರೆ ಪೆಪೆ ಬರ್ತಾನೆ ಅಂದರೆ ಅಲ್ಲೊಂದು ವಿಷ್ಯ ಇದೆ ಎನ್ನುವಂತಹ ಪಾತ್ರ ಅದು" ಅಂತಾರೆ.
ಹಾಗೇ ಧನ್ಯಾರಾಮ್ ಕುಮಾರ್ ಅವರ ಪೌಡರ್ ಸಿನಿಮಾ ಬಗ್ಗೆ ವಿನಯ್ ಕೇಳಿದ್ದು, ಅದಕ್ಕೆ ಧನ್ಯಾ, "ಪೌಡರ್ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದಾಗ ಖುಷಿಯಾಯಿತು. ನನ್ನ ಪಾತ್ರ ಬಂದಾಗ ಸಖತ್ ಎಂಜಾಯ್ ಮಾಡ್ತಾ ಇದ್ರು. ಅದು ನನಗೆ ಖುಷಿ ಆಯಿತು." ಎಂದು ಹೇಳಿದರು.
ಮತ್ತೆ ಮಾತು ಮುಂದುವರಿಸಿದ ವಿನಯ್, "ಪೆಪೆ ಸಿನಿಮಾದ ಪಾತ್ರ ಮಾಡೋದು ಕಷ್ಟ ಆಯಿತು. ಕ್ಲೈಮ್ಯಾಕ್ಸ್ ಸನ್ನಿವೇಶದ ಫೈಟ್ ಸೀನ್ ಅನ್ನು ಸಕಲೇಶಪುರದ ಕಾಡಲ್ಲಿ ಮಾಡಬೇಕಾದರೆ ನನಗೆ ಸ್ವಲ್ಪ ಕಷ್ಟ ಆಯಿತು. ಈ ಫೈಟ್ ಸೀನ್ ಸಾಹಸ ನಿರ್ದೇಶಕ ರವಿವರ್ಮ ಸಾರ್ ಫೈಟ್ ಕಂಪೋಸ್ ಮಾಡಿದ್ರು, ಬಹುತೇಕ ಟೈಮಲ್ಲಿ ನಾನು ಫೈಟ್ ಸೀನ್ ಜಾಗದಲ್ಲಿ ಕಲ್ಲುಗಳಿದ್ರೆ ನಾನೇ ಎತ್ತಿ ಹಾಕ್ತೀನಿ. ಆದರೆ ಕ್ಲೈಮಾಕ್ಸ್ ಫೈಟ್ ಸೀನ್ ಮಾಡುವಾಗ ಒಂದು ಕಾಲು ಕಲ್ಲಿನ ಮೇಲೆ ಇಟ್ಟಾಗ ರಕ್ತ ಬರುವಂತೆ ಆಯಿತು. ಏನ್ಮಾಡೋದು ಅಂತಾ ಗೊತ್ತಾಗಲಿಲ್ಲ. ಯಾಕಂದ್ರೆ ಶೂಟಿಂಗ್ ಮುಗಿಸಬೇಕಾಗಿತ್ತು" ಎಂದರು.
ಹಾಗೇ ಪೌಡರ್ ಸಿನಿಮಾದ ಕೆಲ ಅನುಭವಗಳನ್ನು ಹಂಚಿಕೊಂಡ ಧನ್ಯಾ, "ಪೌಡರ್ ಸಿನಿಮಾದಲ್ಲಿ ಅಭಿನಯಿಸಬೇಕಾದರೆ ನಮ್ಮ ಸೆಟ್ಟಲ್ಲಿ ರಂಗಾಯಣ ರಘು ಸರ್, ಗೋಪಾಲಕೃಷ್ಣ ದೇಶಪಾಂಡೇ ಸರ್ ಅವರನ್ನು ನೋಡಿ ತುಂಬಾ ಕಲಿತುಕೊಂಡೆ" ಎಂದರು.
"ಪೆಪೆ ಸಿನಿಮಾದಲ್ಲಿ ಮಗ್ಗು ಅಂತಾ ಕ್ಯಾರೆಕ್ಟರ್ ಇದೆ. ಆ ಕ್ಯಾರೆಕ್ಟರ್ ಜೊತೆ ನನ್ನ ಫೈಟ್ ಇದೆ ಕೊಡಗಿನಲ್ಲಿ, ಪಂಚೆಯಲ್ಲಿ ಶೂಟಿಂಗ್ ಮಾಡಿದ್ವಿ. ಮಳೆ ಟೈಮಲ್ಲಿ ನೆಲದ ಮೇಲೆ ಹೊರಳಾಡಿ ಫೈಟ್ ಮಾಡುವ ಸೀನ್. ಆ ಟೈಮಲ್ಲಿ ಬಿಡುವಿಲ್ಲದೆ ಶೂಟಿಂಗ್ ಮಾಡಿ ನನಗೆ ಸುಸ್ತು ಆಗಿ ತಲೆ ಓಡ್ತಿರಲಿಲ್ಲ. ಡೈರೆಕ್ಟರ್ ಆಕ್ಷನ್ ಅಂದ್ರೆ, ಆ ಮಗ್ಗು ಪಾತ್ರಧಾರಿ ನಿಜವಾಗ್ಲೂ ಫೈಟ್ ಮಾಡೋದಿಕ್ಕೆ ಶುರು ಮಾಡಿದ್ರು. ಆಗ ನನ್ನ ಕೂದಲನ್ನೂ ಹಿಡಿದುಕೊಂಡಿದ್ರು, ಆಗ ಸ್ವಲ್ಪ ಕಷ್ಟ ಆಯ್ತು" ಎಂದರು ವಿನಯ್.