ತಮಿಳು ನಟ ವಿಜಯ್ ಸೇತುಪತಿ ತಮ್ಮ ಮುಂದಿನ 'ಮಹಾರಾಜ' ಸಿನಿಮಾವನ್ನು ಪ್ರಚಾರ ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಶನ್ ವೇಳೆ, ಕಿರಿಯ ನಾಯಕಿಯರೊಂದಿಗೆ ಕೆಲಸ ಮಾಡುವ ನಾಯಕರ ದೃಷ್ಟಿಕೋನದ ಬಗ್ಗೆ ಸೇತುಪತಿಗೆ ಪ್ರಶ್ನೆ ಎದುರಾಯಿತು. ಈ ವಿಷಯವನ್ನು ಮುಂದುವರಿಸೋದನ್ನು ನಟ ನಯವಾಗಿ ನಿರಾಕರಿಸಿದರು. ನಾನು ಈ ಹಿಂದೆಯೇ ಈ ಬಗ್ಗೆ ಮಾತನಾಡಿದ್ದೇನೆ. 'ದಯವಿಟ್ಟು ಈ ವಿಷಯವನ್ನು ಬಿಡಿ' ಎಂದು ಮಾಧ್ಯಮದವರಿಗೆ ವಿನಂತಿ ಮಾಡಿದರು.
ಕೆಲ ದಿನಗಳ ಹಿಂದಿನ ಸಂದರ್ಶನವೊಂದರಲ್ಲಿ ವಿಜಯ್ ಸೇತುಪತಿ, 2021ರ ಉಪ್ಪೆನ್ನಾ ಚಿತ್ರದಲ್ಲಿ ಕೃತಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಉಲ್ಲೇಖಿಸಿ, ಈ ಮೇಲಿನ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರು. ಮತ್ತೊಂದು ಪ್ರಾಜೆಕ್ಟ್ನಲ್ಲಿ ಕೃತಿ ಶೆಟ್ಟಿಯನ್ನು ನಾಯಕಿಯಾಗಿ ಪರಿಗಣಿಸಲು ನಿರ್ದೇಶಕರೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಆದರೆ, ಆ ಆಫರ್ ಅನ್ನು ನಿರಾಕರಿಸಿದ್ದೆ ಎಂದು ತಿಳಿಸಿದರು.
ಆ ಚಿತ್ರದಲ್ಲಿ ಇವರು ತಂದೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ಲೈಮ್ಯಾಕ್ಸ್ ಸೀನ್ನಲ್ಲಿ ಗೊಂದಲಕ್ಕೊಳಗಾಗಿದ್ದ ಕೃತಿಗೆ ಪ್ರೋತ್ಸಾಹ ನೀಡಿದ್ದ ವಿಜಯ್, ನನ್ನನ್ನು ನಿನ್ನ ತಂದೆಯೆಂದು ಭಾವಿಸಿ, ಮುಕ್ತವಾಗಿ ಅಭಿನಯಿಸು ಎಂದು ಧೈರ್ಯ ತುಂಬಿದ್ದರು. ಉಪ್ಪೇನ್ನಾ ಚಿತ್ರೀಕರಣದ ವೇಳೆ ತಂದೆ ಮಗಳ ಪಾತ್ರವೆಂಬುದನ್ನು ತಿಳಿಯದ ಮತ್ತೋರ್ವ ನಿರ್ದೇಶಕರು ಈ ಆಫರ್ ಕೊಟ್ಟಿದ್ದರೆಂಬುದನ್ನೂ ಹಿಂದಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
ಯಾವ ನಾಯಕನೊಂದಿಗೆ ನಟಿಸಬೇಕು ಎಂಬ ನಿರ್ಧಾರವನ್ನು ನಟಿಮಣಿಯರೂ ತೆಗೆದುಕೊಳ್ಳುತ್ತಾರೆ. "ಅವರು (ಕೃತಿ) ನನ್ನೊಂದಿಗೆ ನಟಿಸಲು ಬಯಸುವುದಿಲ್ಲ ಎಂದು ಹೇಳಿದರೆ?, ಅವರು ಕೂಡ ಇಲ್ಲ ಎಂದು ಹೇಳಬಹುದು. ಒಮ್ಮೆ ಮಗಳಾಗಿ ನಟಿಸಿದ ಅವರು ಈ ಆಫರ್ ತಿರಸ್ಕರಿಸುತ್ತಿದ್ದರೇನೋ" ಎಂದು ವಿಜಯ್ ತಿಳಿಸಿದರು. ತಮ್ಮ ಪ್ರಮೋಶನಲ್ ಈವೆಂಟ್ನಲ್ಲಿ ಈ ವಿಷಯದ ಬಗ್ಗೆ ಈಗಾಗಲೇ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯೆಗೆ ನಯವಾಗಿ ತಿರಸ್ಕರಿಸಿದರು.