ರಿಯಾಲಿಟಿ ಶೋ ಜೊತೆಗೆ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಪ್ರಿಯರನ್ನು ರಂಜಿಸುತ್ತಿರುವ ನಟ ವಿಜಯ ರಾಘವೇಂದ್ರ. 'ಕೇಸ್ ಆಫ್ ಕೊಂಡಾಣ' ಬಳಿಕ ಇದೀಗ ಮತ್ತೊಂದು ಕ್ರೈಂ ಥ್ರಿಲ್ಲರ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸದ್ಯ ಚಿತ್ರದ ಶೀರ್ಷಿಕೆಯಿಂದ ಚಂದನವನದಲ್ಲಿ ಗಮನ ಸೆಳೆಯುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಜೋಗ್ 101' ಟ್ರೇಲರ್ ರಿಲೀಸ್ ಆಗಿದೆ. ವಿಜಯ್ ಕನ್ನಡಿಗ ಆ್ಯಕ್ಷನ್ ಕಟ್ ಹೇಳಿರುವ 'ಜೋಗ್ 101' ಟ್ರೇಲರ್ ಇದೀಗ ಚಿತ್ರಾಭಿಮಾನಿಗಳಿಂದ ಜನಮನ್ನಣೆ ಪಡೆಯುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರದ ಬಗ್ಗೆ ಚಿತ್ರತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದೆ.
ನಾಯಕ ವಿಜಯ್ ರಾಘವೇಂದ್ರ ಮಾತನಾಡಿ, "ಜೋಗ್ 101 ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. ಲವ್, ಕಾಮಿಡಿ ಹೀಗೆ ಎಲ್ಲಾ ಅಂಶಗಳೂ ಇವೆ. ಅವಿನಾಶ್ ಆರ್.ಬಾಸೂತ್ಕರ್ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಚಿತ್ರಗಳಲ್ಲಿ ಒಂದೆರಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದೂ ಇರಲಿಲ್ಲ. 'ಜೋಗ್ 101' ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿವೆ. ಇನ್ನು ನಿರ್ಮಾಪಕರ ಹೆಸರು ರಾಘವೇಂದ್ರ, ನಿರ್ದೇಶಕರ ಹೆಸರು ವಿಜಯ್ ಅವರಿಬ್ಬರ ಹೆಸರು ಸೇರಿಸಿದಾಗ ನನ್ನ ಹೆಸರು ವಿಜಯ್ ರಾಘವೇಂದ್ರ. ವಿಕ್ರಮ್ ನನ್ನ ಪಾತ್ರದ ಹೆಸರು. ಸುನೀತ್ ಹಲಗೇರಿ ಅವರ ಛಾಯಾಗ್ರಹಣದಲ್ಲಿ ಜೋಗ್ ನೋಡುವುದೇ ಚಂದ" ಎಂದರು.
ನಿರ್ದೇಶಕ ವಿಜಯ್ ಕನ್ನಡಿಗ ಮಾತನಾಡಿ, "ಈ ಚಿತ್ರದ ಕಥೆ ಬರೆದು ನಿರ್ಮಾಪಕರ ಹತ್ತಿರ ಹೋದಾಗ ಕಥೆ ಮೆಚ್ಚಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರದ ಕಥೆಗೆ ವಿಜಯ್ ರಾಘವೇಂದ್ರ ಅವರೇ ಸೂಕ್ತ ಎಂದು ಅಂದುಕೊಂಡಿದ್ದೆವು. ವಿಜಯ್ ರಾಘವೇಂದ್ರ ಅವರು ಕಥೆ ಕೇಳಿ ನಟಿಸಲು ಒಪ್ಪಿಕೊಂಡರು. ಇದೊಂದು ಥ್ರಿಲ್ಲರ್ ಕಥೆ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ" ಎಂದು ತಿಳಿಸಿದರು.