ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮುಂದಿನ ಬಹುನಿರೀಕ್ಷಿತ 'ಛಾವಾ' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನಾಧರಿಸಿದ ಸಿನಿಮಾದಲ್ಲಿ, ವಿಕ್ಕಿ ಮುಖ್ಯಭೂಮಿಕೆ ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದ್ದು, ಇಂದು ಟ್ರೇಲರ್ ರಿಲೀಸ್ ಆಗಿದೆ.
ಬಹುನಿರೀಕ್ಷಿತ ಪೀರಿಯಾಡಿಕಲ್ ಡ್ರಾಮಾ 'ಛಾವಾ' ಪ್ರಚಾರ ಪ್ರಾರಂಭವಾಗಿದ್ದು, ಚಿತ್ರತಂಡವಿಂದು ಟ್ರೇಲರ್ ಅನಾವರಣಗೊಳಿಸೋ ಮೂಲಕ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದ್ದು, ಈ ಚಿತ್ರ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಅವರ ಆಳ್ವಿಕೆಗೆ ಸಲ್ಲುತ್ತಿರುವ ಗೌರವವಾಗಿದೆ. ಮುಂದಿನ ತಿಂಗಳು ಫೆಬ್ರವರಿ 14ರಂದು ದೊಡ್ಡ ಪರದೆ ಮೇಲೆ ಪ್ರದರ್ಶನಗೊಳ್ಳಲಿರುವ ಸಿನಿಮಾ, ವಿಶೇಷವಾಗಿ ತಾರಾಬಳಗದಿಂದ ಸಖತ್ ಸದ್ದು ಮಾಡಿತ್ತು. ಇದೀಗ ಟ್ರೇಲರ್‌ನಲ್ಲಿ ಪ್ರದರ್ಶಿಸಲಾದ ಭರ್ಜರಿ ದೃಶ್ಯಗಳಿಂದಾಗಿ ಸಂಚಲ ಸೃಷ್ಟಿಸಿದೆ.
ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಕನ್ನಡತಿ ರಶ್ಮಿಕಾ ಮಂದಣ್ಣ ತಮ್ಮ ಗಡಿ ವಿಸ್ತರಿಸಿಕೊಳ್ಳುತ್ತಾ, ಸಿನಿಮಾ ವೃತ್ತಿಜೀವನದಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಈಗಾಗಲೇ ದೊಡ್ಡ ತಾರೆಯರೊಂದಿಗೆ ತೆರೆ ಹಂಚಿಕೊಂಡಿರುವ ನಟಿಯೀಗ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಜೊತೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಅನ್ನೋದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.