ಕಳೆದ ವರ್ಷ 'ಜೈಲರ್' ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೂಲಿ'. ತಮ್ಮ ಈ ಸಿನಿಮಾ ಮೂಲಕ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಅವರ ವಿಕ್ರಮ್ ಮತ್ತು ದಳಪತಿ ವಿಜಯ್ ಅವರ ಲಿಯೋ, ಮಾಸ್ಟರ್‌ನಂತಹ ಹಿಟ್ ಚಿತ್ರಗಳಿಂದ ಗುರುತಿಸಿಕೊಂಡಿರುವ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪ್ಪಿ:ರಜನಿಕಾಂತ್ ನಟನೆಯ ಈ ಚಿತ್ರವನ್ನು ಈ ಮೊದಲು 'ತಲೈವರ್ 171' ಎಂದು ಉಲ್ಲೇಖಿಸಲಾಗುತ್ತಿತ್ತು. ನಂತರ ಆ್ಯಕ್ಷನ್-ಪ್ಯಾಕ್ಡ್ ಟೀಸರ್ ಮೂಲಕ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಲಾಯಿತು. 'ಕೂಲಿ' ಶೀರ್ಷಿಕೆ ಪ್ರೇಕ್ಷಕರ ಗಮನ ಸೆಳೆದಿದ್ದು, ಸಂಪೂರ್ಣ ಸಿನಿಮಾ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಇದೀಗ ಕನ್ನಡ ಚಿತ್ರರಂಗದ ಬುದ್ಧಿವಂತ ಖ್ಯಾತಿಯ ನಟ-ನಿರ್ದೇಶಕ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಉಪೇಂದ್ರ ಪೋಸ್ಟ್:ಈ ಗುಡ್ ನ್ಯೂಸ್ ಅನ್ನು ಸ್ವತಃ ನಟ-ನಿರ್ದೇಶಕ ಉಪೇಂದ್ರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಜನಿ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿ, 'ನಿಮ್ಮ ಆಶೀರ್ವಾದದಿಂದ ನನ್ನ ಸೂಪರ್ ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ಡಿಲೀಟ್ ಮಾಡಿದ ರಿಯಲ್ ಸ್ಟಾರ್:ಪೋಸ್ಟ್ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಉಪೇಂದ್ರ ಅವರು ಈ ಫೋಟೋ ಡಿಲೀಟ್ ಮಾಡಿದ್ದಾರೆ. ಆದ್ರೆ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ನಟಿಸುತ್ತಿರೋದು ಪಕ್ಕಾ ಆಗಿದೆ.