ಉಪೇಂದ್ರ ಸಾರಥ್ಯದ ವಿಭಿನ್ನ ಕಥಾಹಂದರವುಳ್ಳ 'ಯುಐ' ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆಗಳೊಂದಿಗೆ ಸಾಗಿದೆ. ತನ್ನ ಮೊದಲ ದಿನ 6.95 ಕೋಟಿ ರೂಪಾಯಿ ಸಂಗ್ರಹಿಸೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸಿನಿಮಾ ಈವರೆಗೆ ಒಟ್ಟು 18.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ವರದಿಯನ್ನು ಆಧರಿಸಿದ್ದು, ಈ ಅಂಕಿ-ಅಂಶ ಏರುವ ಸಾಧ್ಯತೆಗಳಿವೆ. ಸಿನಿಮಾಗೆ ಬಂದಿರುವ ಪ್ರತಿಕ್ರಿಯೆ ಬಹಳ ವಿಭಿನ್ನವಾಗಿದೆ. ಅಲ್ಲಿಗೆ ಈ ಪ್ರಾಜೆಕ್ಟ್ ಗಟ್ಟಿ ಕಥಾಹಂದರ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.
ಒಂಭತ್ತು ವರ್ಷಗಳ ನಂತರ, ಕನ್ನಡ ಅಲ್ಲದೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರಾಂತ ನಟ-ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಉಪೇಂದ್ರ ಅವರ ನಿರ್ದೇಶನದಲ್ಲಿ ಬಂದ ಚಿತ್ರವಿದು. ತಮ್ಮ ಹಿಂದಿನ ಸಿನಿಮಾಗಳಂತೆಯೇ ವಿಭಿನ್ನ ಬಗೆಯ ಕಥೆಯೊಂದಿಗೆ ಮರಳಿದ್ದಾರೆ. ಯುಐ ತನ್ನ ಕಥೆ ಹೇಳುವಿಕೆ ಮತ್ತು ನೂತನ ಪ್ರಯೋಗದಿಂದಾಗಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ವಿಭಿನ್ನ ಕಥೆಗೆ ಹೆಸರುವಾಸಿಯಾಗಿರುವ ಉಪ್ಪಿ ಈ ಬಾರಿಯೂ ತಮ್ಮ ಸಿಗ್ನೇಚರ್ ಸ್ಟೈಲ್‌ಗೆ ಬದ್ಧರಾಗಿದ್ದಾರೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವವಲ್ಲಿ ಈ ಬಾರಿಯೂ ಯಶಸ್ಸು ಕಂಡಿದ್ದಾರೆ.
ಪುಷ್ಪ 2: ದಿ ರೂಲ್, ಮುಫಾಸಾ: ದಿ ಲಯನ್ ಕಿಂಗ್ ಮತ್ತು ವಿದುತಲೈ 2 ನಂತಹ ದೊಡ್ಡ ಸಿನಿಮಾಗಳ ಸ್ಪರ್ಧೆಯ ಹೊರತಾಗಿಯೂ, ಯುಐ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿಲ್ಲ. ಉಪೇಂದ್ರ ಅವರ ಬುದ್ಧಿವಂತಿಕೆ, ಸಿನಿಅನುಭವ ಒದಗಿಸುವ ರೀತಿ ಇಂದಿಗೂ ಸಿನಿಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂಬುದನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶ ಸಾಬೀತುಪಡಿಸುತ್ತಿದೆ.
ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿ ಸಾಗಿದೆ. ಕೇವಲ ಮೂರು ದಿನಗಳಲ್ಲಿ, ಭಾರತದಲ್ಲಿ 18.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಮೂರನೇ ದಿನ 5.75 ಕೋಟಿ ರೂ. ಸಂಪಾದನೆಯಾಗಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ತೀವ್ರ ಪೈಪೋಟಿಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.