ಬೆಂಗಳೂರು: ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪದಡಿ ಕೆವಿಎನ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹೆಚ್ಎಂಟಿಯ ಜನರಲ್ ಮ್ಯಾನೇಜರ್ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ.
ಈ ಸಂಬಂಧ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪೀಣ್ಯ ಪ್ಲಾಂಟೇಷನ್ ಸರ್ವೇ ನಂ.2ರ ಮೀಸಲು ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ಗೆ ಸೆಟ್ ನಿರ್ಮಿಸಲು ಮರಗಿಡಗಳನ್ನು ಕತ್ತರಿಸಿರುವ ಆರೋಪ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಅರಣ್ಯ ಕಾಯ್ದೆಯ ಪ್ರಕಾರ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಉಪಗ್ರಹ ಆಧಾರಿತ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಯಾರು ಮರಗಳನ್ನು ಕಡಿದಿದ್ದಾರೆ ಎಂಬುದು ಗೊತ್ತಿಲ್ಲ. ತನಿಖೆ ಸಾಗಿದ್ದು, ಈ ಬಗ್ಗೆ ತಿಳಿದುಬರಲಿದೆ. ತನಿಖೆಯಲ್ಲಿ ಏನು ವರದಿ ಬರುತ್ತದೋ ಆ ಪ್ರಕಾರ ಕ್ರಮ ಆಗಲಿದೆ. ಕಳೆದ ವರ್ಷದ ಉಪಗ್ರಹ ಆಧಾರಿತ ಚಿತ್ರಗಳು ಸಹ ಇವೆ. ಇವೆಲ್ಲವೂ ತನಿಖೆಯಲ್ಲಿ ಬರುತ್ತವೆ. ಪೀಣ್ಯ ಪ್ಲಾಂಟೇಷನ್ನಲ್ಲಿ ದಟ್ಟ ಕಾಡಿತ್ತು, ಮರಗಳಿದ್ದವು. ಅಕ್ರಮವಾಗಿ ಮರ ಕಡಿದಿರುವ ಆರೋಪಗಳು ಕೇಳಿಬಂದವು. ನಮ್ಮ ಅಧಿಕಾರಿಗಳು ಹೋಗಿ ಪರಿಶೀಲಿಸಿದ್ದರು. ಮರ ಕಡಿದಿದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮರಗಳನ್ನು ಕಡಿದದ್ದು ಸಾಬೀತಾದ ಹಿನ್ನೆಲೆ, ಎಫ್ಐಆರ್ ದಾಖಲಾಗಿದೆ. ಯಾರು ಮರ ಕಡಿದಿದ್ದಾರೆ ಅನ್ನೋದು ಗೊತ್ತಿಲ್ಲ. ತನಿಖೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ಮೇಲೆ ಮಾಹಿತಿ ಸಿಗುತ್ತದೆ. ಎಷ್ಟು ಮರಗಳು ಅನ್ನೋ ಮಾಹಿತಿ ಇಲ್ಲ. ಚಿತ್ರತಂಡ ಮರ ಕಡಿದಿದೆ ಅಂತ ಹೇಳಲು ಬರೋದಿಲ್ಲ. ತನಿಖೆಯಿಂದ ಎಲ್ಲವೂ ಹೊರಬರಬೇಕು. ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.