ಕನ್ನಡ ಕಿರುತೆರೆಯ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ 'ಬಿಗ್ ಬಾಸ್ ಸೀಸನ್ 11' ಎಂಟನೇ ವಾರ ಪೂರ್ಣಗೊಳಿಸಿ, ಒಂಭತ್ತನೇ ವಾರದ ಆಟ ಆರಂಭಿಸಿದೆ. ಕಳೆದ ಸಂಚಿಕೆಯಲ್ಲಿ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಕಳೆದ ವಾರ ಸ್ನೇಹಿತೆ ಅನುಷಾ ಎಲಿಮಿನೇಟ್ ಆಗಿದ್ದರು. ಅಂದೂ ಕೂಡ ಕೊನೆ ಕ್ಷಣದಲ್ಲಿ ಧರ್ಮ ಎಲಿಮಿನೇಷನ್ನಿಂದ ಬಚಾವ್ ಆಗಿದ್ದರು. ಅನುಷಾ ಅವರ ಬೆನ್ನಲ್ಲೇ ಇದೀಗ ಧರ್ಮ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದಿದ್ದರೂ ಒಳಗಿರುವ ಸ್ಪರ್ಧಿಗಳೂ ಸೇರಿದಂತೆ ಕನ್ನಡಿಗರ ಮನಗೆಲ್ಲುವಲ್ಲಿ ಧರ್ಮ ಯಶ ಕಂಡಿದ್ದಾರೆ. ಇವರು ತಮ್ಮ ಉತ್ತಮ ನಡೆ ನುಡಿ, ಮೃದು ಮನಸ್ಸು, ನಗುವಿನಿಂದ ಹೆಸರುವಾಸಿಯಾಗಿದ್ದರು.
ಒಂಭತ್ತನೇ ವಾರ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಕ್ಯಾಪ್ಟನ್. ಅವರ ಕ್ಯಾಪ್ಟನ್ಸಿಯಲ್ಲಿ ಒಂದು ಗಮನಾರ್ಹ ಟಾಸ್ಕ್ ನೀಡಲಾಗಿದೆ. ಇದು ಸ್ಪರ್ಧಿಗಳ ನಡುವಿನ ಮನಸ್ತಾಪವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಇದರ ಸುಳಿವು ''ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ದರ್ಬಾರ್'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡಿರುವ ಪ್ರೋಮೋದಲ್ಲಿ ಸಿಕ್ಕಿದೆ.
ಹೌದು, ಈ ವಾರ ಬಿಗ್ ಬಾಸ್ನಲ್ಲಿ ಕಪಟಿ ಮಹಾರಾಜನ ಆಳ್ವಿಕೆ ನಡೆಯಲಿದೆ. ಬಿಗ್ ಬಾಸ್ ಸಾಮ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಟಾಸ್ಕ್ ನೀಡಲಾಗಿದೆ. ಇಡೀ ಮನೆಯ ವಾತಾವರಣ ಬದಲಾಗಿದ್ದು, ಬಿಗ್ ಬಾಸ್ ಸಾಮಾಜ್ಯದ ಅಧಿಪತಿಯಾಗಿ ಕ್ಯಾಪ್ಟನ್ ಉಗ್ರಂ ಮಂಜು ಅಧಿಕಾರ ಕೈಗೆತ್ತಿಕೊಂಡಿದ್ದಾರೆ.
ಪ್ರೋಮೋದಲ್ಲಿ,''ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು'' ಎಂದು ಬಿಗ್ ಬಾಸ್ ಹಿನ್ನೆಲೆ ದನಿ ಕೇಳಿ ಬಂದಿದೆ. ನಿಕೃಷ್ಟ , ಕೊಂಚ ಒರಟ, ಕೊಂಚ ಕಪಟಿ.... ಎಂದೆಲ್ಲಾ ಸ್ಪರ್ಧಿಯೋರ್ವರು ರೂಲ್ಸ್ ಓದುತ್ತಿರುವಂತೆ ತೋರಿದೆ. ಅಲ್ಲಿಗೆ ಈ ರಾಜ ಕಪಟಿಯಾಗಿ ವರ್ತಿಸಬೇಕೆಂಬುದು ಆಟದ ಒಂದು ಅಂಶವಾಗಿರಬಹುದು.