ನವದೆಹಲಿ: ಸೋಮವಾರ ನಿಧನ ಹೊಂದಿದ ಭಾರತೀಯ ಚಿತ್ರರಂಗದ ಅಪ್ರತಿಮ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ನಿರ್ದೇಶಕರಾದ ಶೇಖರ್ ಕಪೂರ್, ಹನ್ಸಲ್ ಮೆಹ್ತಾ, ಮತ್ತು ಸಿನಿ ತಾರೆಯರಾದ ಮನೋಜ್ ಬಾಜಪೇಯಿ, ಅಕ್ಷಯ್ ಕುಮಾರ್ ಮತ್ತು ಕಾಜೋಲ್ ಸೇರಿದಂತೆ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಹಾಗೂ ಇತರ ಕ್ಷೇತ್ರಗಳ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದ ನಿರ್ದೇಶಕ ಶ್ಯಾಮ್ ಬೆನಗಲ್. ಅವರ ಸಿನಿಮಾಗಳು ಎಲ್ಲ ಕಾಲಘಟ್ಟಗಳ ಜನರಿಂದಲೂ ಮೆಚ್ಚುಗೆ ಗಳಿಸಿವೆ ಎಂದು ಬೆನಗಲ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
1970 ಮತ್ತು 1980ರ ದಶಕದಲ್ಲಿ ಭಾರತೀಯ ಸಮಾನಾಂತರ ಸಿನಿಮಾ ಚಳವಳಿಯ ಪ್ರವರ್ತಕರಲ್ಲಿ ಒಬ್ಬರಾಗಿದ್ದ ಬೆನಗಲ್ ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
"ಅಂಕುರ್", "ಮಂಡಿ", "ನಿಶಾಂತ್" ಮತ್ತು "ಜುಬೇದಾ" ಸಿನಿಮಾಗಳು, "ಭಾರತ್ ಏಕ್ ಖೋಜ್" ಮತ್ತು "ಸಂವಿಧಾನ್" ಟಿವಿ ಶೋಗಳಿಗೆ ಹೆಸರುವಾಸಿಯಾದ ನಿರ್ದೇಶಕ ಒಂಬತ್ತು ದಿನಗಳ ಹಿಂದೆ ಡಿ.14 ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಹೊಸ ರೀತಿಯ ಸಿನಿಮಾಗಳಿಗೆ ನಾಂದಿ: ರಾಷ್ಟ್ರಪತಿ:ರಾಷ್ಟ್ರಪತಿ ಮುರ್ಮು ಅವರು, "ಬೆನಗಲ್ ಅವರ ನಿಧನವು ಭಾರತೀಯ ಸಿನಿಮಾ ಮತ್ತು ದೂರದರ್ಶನದ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದ ಅವರು ಹಲವಾರು ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಕಲಾವಿದರನ್ನು ಪರಿಚಯಿಸಿ, ಬೆಳೆಸಿದವರು. ಅವರ ಅಸಾಧಾರಣ ಕೊಡುಗೆಯನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳ ರೂಪದಲ್ಲಿ ಗುರುತಿಸಲಾಗಿದೆ. ಅವರ ಕುಟುಂಬದ ಸದಸ್ಯರು ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಮೇಲೆ ಗಾಢವಾದ ಪ್ರಭಾವ ಬೀರಿದ ಬೆನಗಲ್ - ಪ್ರಧಾನಿ:"ಭಾರತೀಯ ಚಿತ್ರರಂಗದ ಮೇಲೆ ಗಾಢವಾದ ಪ್ರಭಾವ ಬೀರಿದ ಬೆನಗಲ್ ಅವರ ಸಾವು ತೀವ್ರ ದುಃಖ ತಂದಿದೆ. ಅವರ ಸಿನಿಮಾಗಳು ಸಮಾಜದ ವಿವಿಧ ಕ್ಷೇತ್ರಗಳ ಜನರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಇರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಿ ಮೋದಿ ಹೇಳಿದರು.
ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ - ರಾಹುಲ್ ಗಾಂಧಿ:ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಬೆನಗಲ್ ಅವರು ಭಾರತದ ಕಥೆಗಳನ್ನು ಆಳ ಮತ್ತು ಸೂಕ್ಷ್ಮತೆಯಿಂದ ಜೀವಂತಗೊಳಿಸಿದ ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ. ಸಿನಿಮಾದಲ್ಲಿನ ಅವರ ಪರಂಪರೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಬದ್ಧತೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಪ್ರೀತಿಪಾತ್ರರಿಗೆ ಮತ್ತು ವಿಶ್ವಾದ್ಯಂತ ಇರುವ ಅಭಿಮಾನಿಗಳಿಗೆ ಸಂತಾಪಗಳು" ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಹೊಸ ಅಲೆಯ ಸೃಷ್ಟಿಕಾರ:ಸ್ನೇಹಿತ ಹಾಗೂ ಮಾರ್ಗದರ್ಶಿಗೆ ಎಕ್ಸ್ ಮೂಲಕ ವಿದಾಯ ಹೇಳಿರುವ ನಿರ್ದೇಶಕ ಕಪೂರ್, "ಸಿನಿಮಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದವರು. ಅಂಕುರ್, ಮಂಥನ್ ಮತ್ತು ಅಸಂಖ್ಯಾತ ಇತರ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನು ಬದಲಿಸಿದ ವ್ಯಕ್ತಿ #ಶ್ಯಾಮ್ಬೆನೆಗಲ್ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ. ಅವರು ಶಬಾಮಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ಅವರಂತಹ ಮಹಾನ್ ನಟರನ್ನು ಪರಿಚಯಿಸಿದವರು" ಎಂದು ಎಕ್ಷ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಶ್ಯಾಮ್ ಬಾಬು ಎಂದು ಸಂಬೋಧಿಸಿರುವ ಮೆಹ್ತಾ, ಸಿನಿಮಾಗಳಿಗಾಗಿ, ಕಠಿಣ ಕಥೆಗಳು, ಹಾಗೂ ಅದ್ಭುತ ನಟನೆ ಬೇಡುವಂತಹ ಪಾತ್ರಗಳನ್ನು ನೀಡಿದಕ್ಕಾಗಿ, ತಮಗೆ ಸ್ಫೂರ್ತಿಯಾಗಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿಜವಾಗಿಯೂ ನಮ್ಮ ಶ್ರೇಷ್ಠರಲ್ಲಿ ಕೊನೆಯವರು ಎಂದು ಹೇಳಿದ್ದಾರೆ.
ಜುಬೇದಾ ಸಿನಿಮಾದಲ್ಲಿ ಬೆನಗಲ್ ಜೊತೆಗೆ ಕೆಲಸ:2001ರಲ್ಲಿ ಜುಬೇದಾ ಸಿನಿಮಾದಲ್ಲಿ ಬೆನಗಲ್ ಜೊತೆಗೆ ಕೆಲಸ ಮಾಡಿದ್ದ ಬಾಜಪೇಯಿ, "ಬೆನಗಲ್ ಅವರ ಸಾವು ಭಾರತೀಯ ಚಿತ್ರರಂಗಕ್ಕೆ ಹೃದಯ ವಿದ್ರಾವಕ ನಷ್ಟವಾಗಿದೆ. ಶ್ಯಾಮ್ ಬೆನಗಲ್ ಕೇವಲ ದಂತಕಥೆಯಾಗಿರಲಿಲ್ಲ, ಅವರು ಕಥೆ ಹೇಳುವಿಕೆಯನ್ನು ಮರುವ್ಯಾಖ್ಯಾನಿಸಿದ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡಿದ ದಾರ್ಶನಿಕರಾಗಿದ್ದರು. ಜುಬೇದಾದಲ್ಲಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಪರಿವರ್ತಕ ಅನುಭವವಾಗಿದೆ. ಅವರ ವಿಶಿಷ್ಟ ಶೈಲಿಯ ಕಥಾನಿರೂಪಣೆ ಮತ್ತು ಪ್ರದರ್ಶನಗಳ ಸೂಕ್ಷ್ಮ ತಿಳುವಳಿಕೆಗೆ ನನ್ನನ್ನು ಒಡ್ಡಿಕೊಂಡೆ. ಅವರ ನಿರ್ದೇಶನದಲ್ಲಿ ನಾನು ಕಲಿತ ಪಾಠಗಳಿಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.