'ದ ರೂಲರ್ಸ್', ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟಿಸಿರೋ ಚಿತ್ರ. ಅಂಬೇಡ್ಕರ್ ತತ್ವಗಳನ್ನು ಅನುಸರಿಸುವ ಕೋಲಾರದ ಡಾ.ಕೆ.ಎಮ್ ಸಂದೇಶ್ ಕಥೆ, ಚಿತ್ರಕಥೆ ಬರೆದಿದ್ದು, ಯುವ ಪ್ರತಿಭೆಗಳಾದ ವಿಶಾಲ್, ರಿತಿಕಾ ಗೌಡ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ 'ಜೈ ಭೀಮ್' ಎಂಬ ಹಾಡೊಂದು ಅನಾವರಣಗೊಂಡಿದೆ.
ಕರುಣ್ ಸಂಗೀತ ಸಂಯೋಜನೆ, ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿರುವ ಹಾಡಿಗೆ ಕೈಲಾಶ್ ಖೇರ್ ದನಿಯಾಗಿದ್ದಾರೆ. ಹಾಡು ನೊಂದವರ ಪರ ದನಿಯಾಗುವಂತಿದೆ. ಗಟ್ಟಿ ಸಾಹಿತ್ಯ, ಪವರ್ಫುಲ್ ದನಿ ಇರೋ ಈ ಹಾಡು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಸದ್ಯ ಟ್ರೆಂಡಿಂಗ್ನಲ್ಲಿದೆ.
'ಪವರ್ ಆಫ್ ಕಾನ್ಸ್ಟಿಟ್ಯೂಷನ್' ಅನ್ನೋ ಅಡಿ ಬರಹವಿರುವ 'ದ ರೂಲರ್ಸ್' ನೈಜ ಘಟನೆಗಳನ್ನಾಧರಿಸಿರುವ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ, ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನದ ಶಕ್ತಿ ಎಂಥದ್ದು, ಅದು ಭಾರತೀಯ ಪ್ರಜೆಗಳಿಗೆ ಕೊಟ್ಟಿರೋ ಶಕ್ತಿ ಎಂಥದ್ದು ಅನ್ನೋ ವಿಚಾರವನ್ನು ಮೂಲವಾಗಿಸಿಕೊಂಡು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಇಲ್ಲಿ ಮೇಲು ಕೀಳು ಅನ್ನೋ ಸಮುದಾಯಗಳ ಸಂಘರ್ಷದಿಂದ ಮರೆಯಾದ ಮಾನವೀಯತೆಯನ್ನು ಒಂದೆಡೆ ಬಿಂಬಿಸಿದ್ರೆ, ಮತ್ತೊಂದೆಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನು ಪ್ರತಿಪಾದಿಸಲಾಗಿದೆ. 5ಜಿಯಂತಹ ಆಧುನಿಕ ಜಮಾನದಲ್ಲೂ ಜಾತಿ ಅನ್ನೋ ಪಿಡುಗು ಎಷ್ಟರ ಮಟ್ಟಿಗಿದೆ, ಅದರ ಪರಿಣಾಮವೇನು ಅನ್ನೋದನ್ನು ಈ ಚಿತ್ರದ ಮೂಲಕ ಹೇಳೋ ಪ್ರಯತ್ನ ಮಾಡುತ್ತೇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.