ಕನ್ನಡ ಚಿತ್ರರಂಗದಲ್ಲಿ ಬಗೆ ಬಗೆಯ ಸಿನಿಮಾಗಳು, ಹೊಸ ಕಾನ್ಸೆಪ್ಟ್ಗಳುಳ್ಳ ಚಿತ್ರಗಳು ಮೂಡಿ ಬರುತ್ತಿವೆ. ಅದೇ ರೀತಿ ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ತಮ್ಮ ಸಿನಿಮಾಸ್ ಬ್ಯಾನರ್ ಅಡಿ ಸೈಬರ್ ಕ್ರೈಂ ಆಧಾರಿತ 'ದಿ ಡಾರ್ಕ್ ವೆಬ್' ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದು ರಿಲೀಸ್ಗೆ ಸಜ್ಜಾಗಿದೆ. ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ದಿ ಡಾರ್ಕ್ ವೆಬ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿತ್ತು. ಇದೀಗ ಈ ಬಹುನಿರೀಕ್ಷಿತ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಲಾಗಿದೆ
ಸೈಬರ್ ಕ್ರೈಂ ಕಥಾಹಂದರವುಳ್ಳ 'ದಿ ಡಾರ್ಕ್ ವೆಬ್' ಟೀಸರ್ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮೇಘನಾ ಮಿಂಚಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಈ ಸಿನಿಮಾದ ವಿಶೇಷ. ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಿರಣ್ ಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಿರಣ್ ಸ್ವಾಮಿ ನಿರ್ದೇಶನದ ಚೊಚ್ಚಲ ಚಿತ್ರವಿದು.
ಸದ್ಯ ಟೀಸರ್ ರಿಲೀಸ್ ಮಾಡಿರೋ ಚಿತ್ರತಂಡ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಮೊದಲು ಮಾತನಾಡಿದ ನಟ - ನಿರ್ಮಾಪಕ ಮಂಜು ಬನವಾಸೆ, 'ನಾವೆಲ್ಲ ಪತ್ರಕರ್ತರು, ಸಿನಿಮಾ ಕನಸು ಕಾಲೇಜು ದಿನಗಳಿಂದಲೇ ಇತ್ತು. ಎಲ್ಲರೂ ಹೊಸಬರೇ ಆದರಿಂದ ತುಂಬಾ ಕಷ್ಟವಾಗಿತ್ತು. ನಾವು ಪ್ರತಿದಿನ ನೋಡುವ ಕಥೆಗಳೇ ಈ ಸಿನಿಮಾದಲ್ಲೂ ಇದೆ. ಹಣ ಜಾಸ್ತಿ ಆಗಿದೆ ಅಂತಾ ಈ ಸಿನಿಮಾ ಮಾಡಿಲ್ಲ. ಸಿನಿಮಾ ಹುಚ್ಚು ಹಾಗೂ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದು. ನಾವು ಪ್ರತಿದಿನ ನೋಡ್ತಿದ್ದ ಕ್ರೈಮ್ ಬಗ್ಗೆಯೇ ಸಿನಿಮಾ ಮಾಡಿದ್ದೇವೆ' ಎಂದು ತಿಳಿಸಿದರು.