ಹೈದರಾಬಾದ್(ತೆಲಂಗಾಣ): ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನ ಹೊರಭಾಗದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಇಂದು ಬಂಧನಕ್ಕೊಳಪಟ್ಟ ನಟ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
'ಪುಷ್ಪ' ಪಾತ್ರಕ್ಕೆ ಹೆಸರುವಾಸಿಯಾಗಿರುವ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಇದಕ್ಕೂ ಮುನ್ನ ನಾಂಪಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ, ಪೊಲೀಸರು ನಟನನ್ನು ಚಂಚಲ್‌ಗುಡ ಜೈಲಿಗೆ ರವಾನಿಸಲು ಸಿದ್ಧತೆ ನಡೆಸುತ್ತಿದ್ದರು.
ನಾಂಪಲ್ಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತಾದರೂ, ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ಪತ್ರಕರ್ತ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ಬಾಂಬೆ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಪ್ರಕರಣವೇನು?: ಡಿಸೆಂಬರ್ 4ರಂದು 'ಪುಷ್ಪ: ದಿ ರೂಲ್' ಸಿನಿಮಾದ ಪ್ರೀ ರಿಲೀಸ್ ಈವೆಂಟ್ನಲ್ಲಿ ನಡೆದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಸಾವನ್ನಪ್ಪಿದ್ದರು. ಇವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಅನಿರೀಕ್ಷಿತ ಭೇಟಿ, ಅಸಮರ್ಪಕ ಜನಸಂದಣಿ ನಿಯಂತ್ರಣ ಕ್ರಮಗಳು ಕಾಲ್ತುಳಿತಕ್ಕೆ ಕಾರಣವಾಯಿತು ಎಂಬುದು ಆರೋಪ.