'ಟಗರು ಪಲ್ಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಮಗಳು ಅಮೃತಾ ಪ್ರೇಮ್ ಅವರೀಗ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿರುವ ಅಮೃತಾರ ಮುಂದಿನ ಸಿನಿಮಾ ಯಾವುದೆಂದು ಸಿನಿಪ್ರಿಯರು ಎದುರು ನೋಡುತ್ತಿದ್ದರು. ಅಭಿಮಾನಿಗಳ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ.
ಅಮೃತಾ ಪ್ರೇಮ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಳೆದು ತೂಗಿ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕ ಮಹೇಶ್ ಬಾಬು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ತಮ್ಮ ಸಮ್ಮತಿ ಸೂಚಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸುಸಂದರ್ಭ ಚಿತ್ರತಂಡ ಅಮೃತಾರನ್ನು ಸ್ವಾಗತಿಸಿ ಪೋಸ್ಟ್ ಶೇರ್ ಮಾಡಿದೆ. ಸ್ಮೈಲ್ ಗುರು ರಕ್ಷಿತ್ ಜೋಡಿಯಾಗಿ ಅಮೃತಾ ನಟಿಸಲಿದ್ದಾರೆ.
ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ ನಡೆದ 15 ದಿನಗಳ ವರ್ಕ್ ಶಾಪ್ನಲ್ಲಿ ನಾಯಕ ರಕ್ಷಿತ್, ನಾಯಕಿ ಅಮೃತಾ ಪ್ರೇಮ್ ಸೇರಿದಂತೆ ಇಡೀ ತಂಡ ಭಾಗಿಯಾಗಿದೆ. ಅಮೃತಾ ತಮ್ಮ ಪಾತ್ರಕ್ಕೆ ಬೇಕಾದ ಮತ್ತಷ್ಟು ತಯಾರಿಗಳೊಂದಿಗೆ ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಈ ಬಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿರುವ ಅಮೃತಾ, ನನ್ನ ಮುಂದಿನ ಚಿತ್ರ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಇರಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಅಮೃತಾ ಪ್ರೇಮ್ ನಾಯಕಿಯಾಗಿ ಅಭಿನಯಿಸಿದ್ದ 'ಟಗರು ಪಲ್ಯ' ಸಿನಿಮಾ ವಿಶೇಷವಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಹಳ್ಳಿ ಹುಡುಗಿಯಾಗಿ ಅಮೃತಾ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ದೊಡ್ಡ ಕಲಾವಿದರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ದಕ್ಷಿಣದ ವಿವಿಧ ಭಾಷೆಯ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ಟಗರು ಪಲ್ಯದ ನಟಿ ಅಮೃತಾ ಪ್ರೇಮ್, ಅತ್ಯುತ್ತಮ ಡೆಬ್ಯು ಪ್ರಶಸ್ತಿ ಪಡೆದುಕೊಂಡಿದ್ದರು.
ಇದನ್ನೂ ಓದಿ:ರಾಜ್ ಬಿ ಶೆಟ್ಟಿ ಸಿನಿಮಾ ನಿರ್ಮಿಸಲಿದ್ದಾರೆ ಸಾಹಸ ನಿರ್ದೇಶಕ ರವಿವರ್ಮ: 'ರಕ್ಕಸಪುರದೋಳ್'ಗೆ ರಕ್ಷಿತಾ, ಪ್ರೇಮ್ ಸಾಥ್ - Rakkasapuradhol
ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋ ಅಂತಿದ್ದ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ 'ಆಕಾಶ್', 'ಅರಸು' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ:'ಪೌಡರ್' ಹಬ್ಬದಲ್ಲಿ ಭಾಗಿಯಾದ ದುನಿಯಾ ವಿಜಯ್, ಶ್ರೀಮುರಳಿ: ಫೋಟೋಗಳಿಲ್ಲಿವೆ - Powder Habba
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಸಾಗಿದೆ.