ನವದೆಹಲಿ: ಇಸ್ಲಾಮಿಕ್ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ ಅನ್ನು ಕಪೂರ್ ಅಭಿನಯದ 'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿತು. ಈ ಕುರಿತು ಸಲ್ಲಿಸಲಾದ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಕಾಲದ ಪೀಠವು, 'ಹಮಾರೆ ಬಾರಾ' ಚಲನಚಿತ್ರದ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಇತ್ಯರ್ಥವಾಗುವವರೆಗೆ ಚಿತ್ರದ ಬಿಡುಗಡೆಗೆ ತಡೆ ನೀಡಿದೆ. ಜೂನ್ 14ರಂದು ಈ ಸಿನಿಮಾ ಬಿಡುಗಡೆಯಾಗಬೇಕಿತ್ತು.
'ಟೀಸರ್ ವೀಕ್ಷಿಸಿದ್ದೇವೆ, ಆಕ್ಷೇಪಾರ್ಹ ವಿಚಾರಗಳಿವೆ': ಸಿನಿಮಾ ಬಿಡುಗಡೆಗೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಚಲನಚಿತ್ರದ ಪ್ರದರ್ಶನ ಸ್ಥಗಿತಗೊಳಿಸಲಾಗುತ್ತದೆ. ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ನಾವು ಹೈಕೋರ್ಟ್‌ಗೆ ಸೂಚಿಸುತ್ತೇವೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೇ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ''ಚಿತ್ರದ ಟೀಸರ್ ವೀಕ್ಷಿಸಿದ್ದೇವೆ. ಇದರಲ್ಲಿ ಆಕ್ಷೇಪಾರ್ಹ ಸಂಗತಿಗಳಿರುವುದು ಕಂಡುಬಂದಿದೆ'' ಎಂದು ತಿಳಿಸಿದರು.
'ಹಮಾರೆ ಬಾರಾ' ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ನೀಡಿದ ಪ್ರಮಾಣಪತ್ರದ ವಿರುದ್ಧ ಅರ್ಜಿದಾರ ಅಜರ್ ಬಾಷಾ ತಾಂಬೋಲಿ ಎಂಬವರು ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಚಿತ್ರಕ್ಕೆ ನೀಡಲಾದ ಪ್ರಮಾಣೀಕರಣವನ್ನು ಹಿಂಪಡೆಯಲು ಮತ್ತು ಅದರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಇತ್ತೀಚೆಗೆ ಚಿತ್ರದಿಂದ ಎರಡು ಸಂಭಾಷಣೆಗಳನ್ನು ತೆಗೆಯಲು ನಿರ್ಮಾಪಕರು ಒಪ್ಪಿಕೊಂಡ ನಂತರ ಬಾಂಬೆ ಹೈಕೋರ್ಟ್ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿತ್ತು.