ನವದೆಹಲಿ: ತಾಯ್ತನದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಮೂರು ತಿಂಗಳ ಮುಂಚೆಯೇ ಈ ಕುರಿತು ಕೆಲವು ಸಿದ್ಧತೆಯನ್ನು ಆರಂಭಿಸುವುದು ಅವಶ್ಯವಾಗಿದೆ. ಅದರಲ್ಲೂ ಕ್ಯಾಲ್ಸಿಯಂ ಮತ್ತು ಜಿಂಕ್ ಖನಿಜಾಂಶ ಸೇರಿದಂತೆ ಉತ್ತಮ ಪೋಷಕಾಂಶದ ಕುರಿತು ಅರಿವುದು ಹೊಂದುವುದು ಅಗತ್ಯವಾಗಿದೆ. ಕಾರಣ ಇದು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಅಮೆರಿಕದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ತಾಯ್ತನ ಹೊಂದುವ ಹಂಬಲ ಇರುವವರು ಕೇವಲ ಗರ್ಭಧಾರಣೆ ಮಾತ್ರವಲ್ಲದೇ, ತಮ್ಮ ದೇಹದ ಅಸತೋಲನತೆಯನ್ನು ಪತ್ತೆ ಮಾಡಿ, ಸರಿಯಾದ ಪೋಷಕಾಂಶಗಳಿಗೆ ಒತ್ತು ನೀಡಬೇಕು ಎಂದಿದ್ದಾರೆ.
ಪೋಷಕಾಂಶದ ಕಡೆ ಇರಲಿ ಗಮನ; ಗರ್ಭಿಣಿಯರಲ್ಲಿ ಕಾಡುವ ಸಾಮಾನ್ಯ ಅಸ್ವಸ್ಥತೆ ಅಧಿಕ ರಕ್ತದೊತ್ತಡವಾಗಿದ್ದು, ಇದು ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಗರ್ಭಿಣಿಯರು ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಮಾತ್ರೆ ಬೆಳೆಯುತ್ತಿರುವ ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಈ ಹಿನ್ನೆಲೆ ಅಧಿಕ ರಕ್ತದೊತ್ತಡವನ್ನು ತಪ್ಪಿಸಲು ಗರ್ಭಧಾರಣೆಗೆ ಯೋಜನೆ ರೂಪಿಸುವ ಮೊದಲೇ ಸರಿಯಾದ ಪೋಷಕಾಂಶಕ್ಕೆ ಒತ್ತು ನೀಡುವುದು ಅಗತ್ಯ.
ಅಧ್ಯಯನದ ಫಲಿತಾಂಶದಲ್ಲಿ ಗರ್ಭಧಾರಣೆಗೆ ಮುನ್ನ ಕ್ಯಾಲ್ಸಿಯಂ ಮತ್ತು ಜಿಂಕ್ ಖನಿಜಾಂಶಯುಕ್ತ ಆಹಾರ ಸೇವನೆಗೆ ಒತ್ತು ನೀಡುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡು ಬಂದಿದೆ ಎಂದು ಕೊಲಂಬಿಯಾ ಯುನಿವರ್ಸಿಟಿ ಸಂಶೋಧಕರಾದ ಲಿಪಿಂಗ್ ಲು ತಿಳಿಸಿದ್ದಾರೆ.
ಆಹಾರ ಅಥವಾ ಪೂರಕದ ಮೂಲಕ ಕ್ಯಾಲ್ಸಿಯಂ ಮತ್ತು ಜಿಂಕ್ ಪಡೆಯಬಹುದು. ಈ ಅಧ್ಯಯನಕ್ಕಾಗಿ ಅಮೆರಿದಲ್ಲಿ 7,700 ಗರ್ಭಿಣಿಯರ ದತ್ತಾಂಶ ಪಡೆಯಲಾಗಿದೆ.
ಗರ್ಭಧಾರಣೆಗೆ ಮುನ್ನ ಹೆಚ್ಚಿನ ಕ್ಯಾಲ್ಸಿಯಂ ಸೇವನೆ ಮಾಡುವ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಶೇ 24ರಷ್ಟು ಕಡಿಮೆ ಇದೆ. ಜಿಂಕ್ ಸೇವನೆಯಿಂದ ಶೇ 34ರಷ್ಟು ಕಡಿಮೆ ರಕ್ತದೊತ್ತಡ ಅಪಾಯ ಇದೆ ಎಂದಿದ್ದಾರೆ.
ಈ ಅಧ್ಯಯನವನ್ನು ನ್ಯೂಟ್ರಿಷಿಯನ್ 2024ನಲ್ಲಿ ಮಂಡಿಸಲಾಗಿದೆ. ಫಲಿತಾಂಶಗಳು ಅಗತ್ಯವಾಗಿ ಕಾರಣವನ್ನು ಸಾಬೀತುಪಡಿಸುವುದಿಲ್ಲ. ಆದಾಗ್ಯೂ, ಇದು ಇತರ ಅಧ್ಯಯನಗಳೊಂದಿಗೆ ಹೊಂದಿಕೆಯಾಗುತ್ತವೆ. ಅದು ಎರಡು ಖನಿಜಾಂಶಗಳ ಸೇವನೆ ಗರ್ಭಧಾರಣೆ ಸಂದರ್ಭದಲ್ಲಿನ ಅಧಿಕ ರಕ್ತದೊತ್ತಡ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಷ್ಟು ದಿನಕ್ಕೊಮ್ಮೆ ದೇಹದ ತೂಕ ಪರೀಕ್ಷೆ ಮಾಡಬೇಕು? ಇದರ ಬಗ್ಗೆ ಇದ್ಯಾ ಐಡಿಯಾ