ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ತಮ್ಮ ಇತ್ತೀಚಿನ 'ಮ್ಯಾಕ್ಸ್' ಸಿನಿಮಾದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಸಿನಿಮಾ ಬಹುತೇಕ ಮೆಚ್ಚುಗೆ ಸ್ವೀಕರಿಸಿದ್ದು, ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಇದರ ನಡುವೆ ಸಕ್ಸಸ್ ಸೆಲೆಬ್ರೇಶನ್ನ ಕೇಕ್ಗೆ ಸಂಬಂಧಿಸಿದಂತೆ ಹಲವು ಅಂತೆಕಂತೆಗಳು ಹುಟ್ಟಿಕೊಂಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ಕಿಚ್ಚ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಸಿನಿಮಾ ಸಂಭ್ರಮದಲ್ಲಿ ಸುದೀಪ್ ಅವರು ಪತ್ನಿ ಮತ್ತು ತಮ್ಮವರೊಂದಿಗೆ ಸೇರಿ ಕೇಕ್ ಕತ್ತರಿಸಿದ್ದರು. ಆ ಕೇಕ್ ಮೇಲೆ 'Bossism ಕಾಲ ಮುಗೀತು, Maximum Mass ಕಾಲ ಶುರುವಾಯ್ತು' ಎಂದು ಬರೆಯಲಾಗಿತ್ತು. ಕೇಕ್ ಮತ್ತು ಸೆಲೆಬ್ರೇಶನ್ನ ಫೋಟೋ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಆನ್ಲೈನ್ನಲ್ಲಿ ಅಭಿಪ್ರಾಯಗಳು ವ್ಯಕ್ತವಾಗಲು ಶುರುವಾಯಿತು. ಪರ ವಿರೋಧ ಚರ್ಚೆ ನಡೆಯಿತು. ಇದೀಗ ಮಾಧ್ಯಮದವರೊಂದಿಗಿನ ಸಂವಾದದಲ್ಲಿ ಸ್ವತಃ ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
''ಯಶ್, ಶಿವಣ್ಣ, ಧ್ರುವ ಇವರಿಗೆಲ್ಲರಿಗೂ ಅವರವರ ಫ್ಯಾನ್ಸ್ ಬಾಸ್ ಅಂತಾನೆ ಕರೆಯುತ್ತಾರೆ. ದರ್ಶನ್ ಅವರಿಗೂ ನಂಗೂ ಏನೂ ಇಲ್ಲ ಸರ್. ಬಹಳ ಕಷ್ಟಪಟ್ಟು ಅವರು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬೆಳೆಯಬೇಕು. ಇವೆಲ್ಲಾ ಸಮಸ್ಯೆಗಳು ಬೇಡ'' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
ಆ ವಾಹಿನಿಯಲ್ಲಿ ಒಂದು ಕಲಾವಿದನ ಹೆಸರು ತೆಗೆದುಕೊಂಡು ಟಾಂಟ್ ಅಂತಾ ಹೇಳಿದ್ರು. ಹಾಗೆಲ್ಲಾ ಏನೂ ಇಲ್ಲ. ತಮ್ಮ ಮೆಚ್ಚಿನ ತಾರೆಯರಿಗೆ ಅಭಿಮಾನಿಗಳು ಬಾಸ್ ಅಂತಾನೆ ಉಲ್ಲೇಖಿಸುತ್ತಾರೆ ಎಂದು ತಿಳಿಸಿದ್ರು.
'ಬಾಸಿಸಮ್ ಕೇಕ್' ಫೋಟೋ (Photo: Viral Photo) ನನ್ನ ಒಬ್ಬ ಸ್ನೇಹಿತ, ನನ್ನ ಹುಡುಗ ಬೆಳಗ್ಗೆ ಚಿತ್ರಮಂದಿರಕ್ಕೆ ಹೋಗ್ತಾರೆ. ಈಗ ಈ ಮಾತನ್ನು ಏಕೆ ಹೇಳುತ್ತಿದ್ದೇನಂದ್ರೆ ನನ್ ಹುಡುಗ ಸರ್. ಅವನಿಗೇನಾದ್ರು ಆದ್ರೆ ಮೊದ್ಲು ಎದೆ ಕೊಟ್ಟು ನಿಲ್ಲೋನು ನಾನು. ಅವನು ಒಂದು ಮಾತು ಹೇಳ್ತಾನೆ, ಇವತ್ತಿಂದ ಕಿಚ್ಚ ಬಾಸ್ ಅಂತಾ ಕರೆಯೋದನ್ನು ನಿಲ್ಲಿಸಿ, ಕಿಚ್ಚ ಮಾಸ್ ಅನ್ನೋಣ ಅಂತಾನೆ. ಅದನ್ನೇ ಕೇಕ್ ಮೇಲೆ ಬರೆಸಿಕೊಂಡು ಬರ್ತಾನೆ. ಅದನ್ನೇ ಹಿಡಿದು 'ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ' ಅಂತಾ ಹೇಳಲು ಶುರುವಾಗುತ್ತೆ. ಇದಾದ ಮೇಲೆ ಯಾರದ್ದೋ ಫ್ಯಾನ್ಸ್, ಆ ಹುಡುಗನಿಗೆ ಬೆದರಿಕೆ ಹಾಕೋದೋ ಅಥವಾ ಏನಾದ್ರು ಹೆಚ್ಚು ಕಡಿಮೆ ಮಾಡಿದ್ರು ಅಂದ್ಕೊಳೋಣ....!! ಅದಕ್ಕೆ ನಾನು ಬಿಡೋದಿಲ್ಲ. ಮಾಡಿದ್ರು ಅಂದುಕೊಳ್ಳೋಣ.. ಹಾಗೆ ಹೇಳಿದವರು ಅಥವಾ ಸುದ್ದಿ ಹಬ್ಬಿಸಿದವರು ಜವಾಬ್ದಾರಿ ತೆಗೊಳ್ತಾರಾ ಸರ್ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಯಾರು ಸುದ್ದಿಯನ್ನು ಶುರು ಮಾಡಿದ್ರೋ ಅವರು ಅವರ ಯಜಮಾನ್ರಿಗೆ ಕರಿಯೋದು ಬಾಸ್ ಅಂತಾನೇ ಅಲ್ವಾ? ಹಾಗಾದ್ರೆ ನಾನ್ ಅವ್ರ ಬಾಸ್ಗೆ ಮಾಡಿಸಿದ್ನಾ ಕೇಕ್? ಎಂದು ಪ್ರಶ್ನಿಸಿದ ಸುದೀಪ್, ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ:'ಶೀಘ್ರದಲ್ಲೇ ಮ್ಯಾಕ್ಸ್ ವೀಕ್ಷಿಸಲಿದ್ದೇನೆ': ಮ್ಯಾಕ್ಸ್ ಯಶಸ್ಸಿನ ತೂಕ ಹೆಚ್ಚಿಸಿತು ರಾಜಮೌಳಿ ಗುಣಗಾನ, ಕಿಚ್ಚನಿಂದ ಧನ್ಯವಾದ
ಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಹೀಗೆ ಎಲ್ಲಾ ಸೇರಿದ್ರೇನೆ ಒಂದು ಕನ್ನಡ ಚಿತ್ರರಂಗ ಸರ್. ಇದೇ ಒಂದು ವಾಹಿನಿಯಲ್ಲಿ ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನ್ ಹೇಳಿದ್ದೆ, ಫ್ಯಾನ್ಸ್ಗೆ ಬೈಯೋಕೆ ಹೋಗ್ಬೇಡಿ, ಅವ್ರಿಗೆ ಗೊತ್ತಾಗ್ತಿಲ್ಲ ಏನು ಮಾಡ್ಬೇಕು ಅನ್ನೋದು. ನೋವಲ್ಲಿ ಇದ್ದಾರೆ ಅವ್ರು ಅನ್ನೋದನ್ನ ತಿಳಿಸಿದ್ದೆ. ಹೀಗೆ ನಾನೇ ನನ್ನ ಬಾಯಲ್ಲಿ ಹೇಳಿದ್ಮೇಲೆ ಅವರಿಗೇಕೆ ಟಾಂಟ್ ಕೊಡಲಿ? ಎಂದು ಕಿಚ್ಚ ಪ್ರಶ್ನಿಸಿದರು.
ಇದನ್ನೂ ಓದಿ:ಶಿಡ್ಲಘಟ್ಟದಿಂದ ಸ್ವಿಟ್ಜರ್ಲ್ಯಾಂಡ್ವರೆಗೆ: 'ಸಂಜು ವೆಡ್ಸ್ ಗೀತಾ 2' ಕಥೆ ಕೊಟ್ಟಿದ್ದು ಸುದೀಪ್
ನಮ್ಮ ಹಿರಿಯರು ಚಿತ್ರರಂಗವನ್ನು ಅದ್ಭುತವಾಗಿ ಬೆಳೆಸಿ, ಅದನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ನೀವು ಇನ್ನಷ್ಟು ಬೆಳೆಸಿ ಅಂತಾ ನಮಗೆ ಜವಾಬ್ದಾರಿ ವಹಿಸಿದ್ದಾರೆ. ನಾವಿದನ್ನು ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ಜವಾಬ್ದಾರಿ ವಹಿಸಬೇಕಿದೆ. ತಮ್ಮಂದಿರೇ ನೀವಿದನ್ನು ಬೆಳೆಸಿ ಎಂದು ನಾವು ಹೇಳಬೇಕಿದೆ. ಇದೊಂದು ಕುಟುಂಬ. ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯೋದು. ಆ ಕೇಕ್ ಮಾಡಿಸಿದ ಹುಡುಗನ ಮನಸ್ಸು ಕೂಡಾ ನನಗೆ ಗೊತ್ತು. ಸುದ್ದಿ ಹಬ್ಬಿಸಿದವರಲ್ಲಿ ನಾನು ಕೇಳಿಕೊಳ್ಳೋದು ಇಷ್ಟೇನೆ, ನಾವು ನೀವು ಪ್ರತಿದಿನ ಮುಖ ನೋಡಿಕೊಳ್ಳಬೇಕು. ಪ್ರೀತಿಯಿಂದ ಮಾತನಾಡಿಕೊಳ್ಳಬೇಕಾಗುತ್ತೆ. ನಿಮ್ಮಲ್ಲೂ ಆ ಬೇಧಭಾವ ಬೇಡ, ನಮ್ಮಲ್ಲೂ ಬೇಡ. ಬಹಳ ವರ್ಷಗಳಿಂದ ನಾವು ಪ್ರಯಾಣ ಮಾಡಿಕೊಂಡು ಇಲ್ಲಿವರೆಗೂ ಬಂದಿದ್ದೀವಿ ಅಂದ್ಮೇಲೆ, ನಿಮ್ಮ ಬಗ್ಗೆ ನನಗೆ ಮತ್ತು ನನ್ನ ಬಗ್ಗೆ ನಿಮಗೆ ಗೊತ್ತಿದೆ. ಇಂತಹ ಕ್ಷುಲ್ಲಕ ವಿಷಯಗಳನ್ನು ಅಲ್ಲಲ್ಲೇ ಬಿಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.