ಬಿಗ್ ಬಾಸ್ ಕನ್ನಡ ಸೀಸನ್ 11 ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಪ್ರಸಾರ ಕಾಣುತ್ತಿದೆ. ದಿನದಿಂದ ದಿನಕ್ಕೆ ಈ ಕಾರ್ಯಕ್ರಮ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪಾಪ್ಯುಲರ್ ಪ್ರೊಗ್ರಾಮ್ ನಡೆಸಿಕೊಡುವ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರು ಈ ಶೋನ ಹೈಲೆಟ್ ಅಂದ್ರೆ ಅತಿಶಯೋಕ್ತಿಯಲ್ಲ. ಅವರ ಸಂಚಿಕೆಗಾಗಿಯೇ ಕಾದು ಕೂರುವವರ ಸಂಖ್ಯೆ ಕೂಡಾ ಬಹಳಾನೇ ದೊಡ್ಡದಿದೆ. ವೀಕೆಂಡ್ ಎಪಿಸೋಡ್ಗಳಲ್ಲಿ ತಮ್ಮ ವಾಕ್ಚಾತುರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸೂರೆಗೊಳ್ಳುವ ಕಿಚ್ಚ ಸುದೀಪ್ ಅವರೀಗ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಮಾಡದ ತಪ್ಪಿಗೆ ಕ್ಷಮೆ ಕೋರುವ ಮೂಲಕ ಮಾಣಿಕ್ಯ ಮತ್ತೊಮ್ಮೆ ಅಭಿಮಾನಿಗಳ ಹೃದಯ ಸ್ಪರ್ಶಿಸಿದ್ದಾರೆ.
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಇದೇ ಮೊದಲು ಎಂಬಂತಹ ಘಟನೆ ಕಳೆದ ಸಂಚಿಕೆಯಲ್ಲಿ ನಡೆದಿದೆ. ಕುಗ್ಗಿದ ಶೋಭಾ ಶೆಟ್ಟಿ ಅವರ ಮನವೊಲಿಸಿ ಮನೆಯೊಳಗೆ ಉಳಿದುಕೊಳ್ಳುವಂತೆ ಮಾಡಿದ್ರು ಸುದೀಪ್. ಆದ್ರೆ ಮತ್ತೊಮ್ಮೆ ಅದೇ ರಾಗ ಎಂಬಂತೆ ಕಣ್ಣೀರಿಟ್ಟು, ನನ್ನಿಂದ ಇದು ಸಾಧ್ಯವಿಲ್ಲ, ಇಲ್ಲಿರಲು ಆಗೋದಿಲ್ಲ, ಮನೆಗೆ ಕಳುಹಿಸಿಕೊಡಿ ಎಂದು ಗೋಗರೆದಿದ್ದಾರೆ.
ಅಸಮಾಧಾನಗೊಂಡ ನಿರೂಪಕ ಸುದೀಪ್ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಮನೆಯಿಂದ ಹೊರ ಹೋದ್ರೋ? ಇಲ್ಲವೋ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಆದ್ರೆ ಸುದೀಪ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಯಾರೆಲ್ಲಾ ವೋಟ್ ಮಾಡಿದ್ರೋ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿ, ಈ ಒಂದು ನಡೆಗೆ ಕ್ಷಮೆಯಾಚಿಸಿದ್ದಾರೆ. ಕನ್ನಡಿಗರ ಪ್ರೀತಿಗೆ ಬೆಲೆ ಕಟ್ಟೋಕಾಗೋಲ್ಲ. ಹಾಗಾಗಿ ಕಾರ್ಯಕ್ರಮವನ್ನು ವೀಕ್ಷಿಸಿ, ಬೆಂಬಲಿಸುವವರ ಬಗ್ಗೆ ನಟ ಕಳೆದ ಸಂಚಿಕೆಯಲ್ಲಿ ಮನತುಂಬಿ ಮಾತನಾಡಿದ್ದಾರೆ.