ಹೈದರಾಬಾದ್: ಬಾಲಿವುಡ್ ನಟಿ, ನೃತ್ಯಗಾರ್ತಿ ಹಾಗು ರೂಪದರ್ಶಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 12ರ ಗುರುವಾರ ರಾತ್ರಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಸಲ್ಮಾನ್ ಖಾನ್ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಅವರ ಸಹೋದರ.
ಬುಧವಾರ ಬೆಳಗ್ಗೆ ಅನಿಲ್ ಮೆಹ್ತಾ ತಮ್ಮ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ. ಮೆಹ್ತಾ ಅವರ ಸಾವು ಕುಟುಂಬಸ್ತರು ಮತ್ತು ಸ್ನೇಹಿತರಿಗೆ ಆಘಾತ ಉಂಟು ಮಾಡಿದ್ದು, ಆತ್ಮಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಲೈಕಾ ಅರೋರಾ ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬದಿಂದ ಅಗಾಧ ಬೆಂಬಲ ಸ್ವೀಕರಿಸಿದ್ದು, ಇದೀಗ ಸಲ್ಮಾನ್ ಖಾನ್ ಕೂಡಾ ಭೇಟಿ ನೀಡಿದ್ದಾರೆ. ಅರ್ಬಾಜ್ ತಂದೆ, ಖ್ಯಾತ ಬರಹಗಾರ ಸಲೀಂ ಖಾನ್ ಮತ್ತು ಸಹೋದರರಾದ ಸೊಹೈಲ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ, ಅರ್ಪಿತಾ ಖಾನ್ ಶರ್ಮಾ ಸೇರಿದಂತೆ ಖಾನ್ ಕುಟುಂಬದ ಇತರೆ ಸದಸ್ಯರು ಮಲೈಕಾ ಅವರ ಕಠಿಣ ಸಮಯದಲ್ಲಿ ಬೆಂಬಲ ನೀಡಿದ್ದಾರೆ. ಮಾಜಿ ಪತಿಯಾದರೂ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದು, ಸಂಬಂಧಗಳ ಮೌಲ್ಯ ತಿಳಿಸಿದ್ದಾರೆ.
ದುರ್ಘಟನೆ ನಡೆದ ಸಂದರ್ಭ ಮಲೈಕಾ ಅರೋರಾ ಮನೆಯಲ್ಲಿರಲಿಲ್ಲ. ಪುಣೆಯಲ್ಲಿದ್ದ ಅವರು ವಿಷಯ ತಿಳಿದ ಕೂಡಲೇ ಪ್ರಯಾಣ ಬೆಳೆಸಿದರು. ನಟಿ ಮನೆ ತಲುಪುವುದಕ್ಕೂ ಮುನ್ನ ಮಾಜಿ ಪತಿ ಅರ್ಬಾಜ್ ಖಾನ್, ರೂಮರ್ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಉಪಸ್ಥಿತರಿದ್ದರು. ಕಳೆದರೆದು ದಿನ ಬಾಲಿವುಡ್ನ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಕರೀಷ್ಮಾ ಕಪೂರ್, ಅನನ್ಯಾ ಪಾಂಡೆ, ಚಂಕಿ ಪಾಂಡೆ, ಗೌರಿ ಖಾನ್ ಸೇರಿದಂತೆ ಹಲವರು ಮಲೈಕಾ ಮನೆ ಬಳಿ ಕಾಣಿಸಿಕೊಂಡಿದ್ದಾರೆ.