ಹೈದರಾಬಾದ್: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ದೇವರ' ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಈ ಚಿತ್ರ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿ, ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಸಿನಿಪ್ರಿಯರ ಸಂಭ್ರಮ ಮುಗಿಲು ಮುಟ್ಟಿದೆ. ಆದ್ರೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಆಘಾತಕಾರಿ ಘಟನೆ ನಡೆದಿದೆ. ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿಯೊಬ್ಬರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಅಪ್ಸರಾ ಥಿಯೇಟರ್‌ನಲ್ಲಿ ದೇವರ ವಿಶೇಷ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, 35ರ ಹರೆಯದ ಮಸ್ತಾನ್ ಎಂಬ ಅಭಿಮಾನಿ ಚಿತ್ರದ ಪ್ರದರ್ಶನದ ಸಂದರ್ಭ ಬಹಳ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಿದ್ದರು. ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆ ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅದಾಗ್ಯೂ ಅವರು ಬದುಕಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಮಸ್ತಾನ್ ಅವರ ಆಘಾತಕಾರಿ ಸಾವನ್ನು ವೈದ್ಯರು ದೃಢಪಡಿಸಿದರು.
ಕುಟುಂಬಕ್ಕೆ ಆಘಾತ ತಂದ ಸಾವು:ಮಸ್ತಾನ್ ಸಾವು ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಆಘಾತ ಸೃಷ್ಟಿಸಿದೆ. ಮಸ್ತಾನ್ ಸಾವನ್ನು ನಂಬಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ. ತಮ್ಮ ಮೆಚ್ಚಿನ ನಟನ ಚಿತ್ರವನ್ನು ಆನಂದಿಸುತ್ತಿರುವಾಗ ಇಂಥ ಘಟನೆ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಕ್ಕಿಲ್ಲ. ವರದಿಗಳ ಪ್ರಕಾರ, ಮಸ್ತಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.