ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್'ಗೆ ಅಭಿನಯ ಚಕ್ರವರ್ತಿ ಸುದೀಪ್ ಅವರು ವಿದಾಯ ಘೋಷಿಸಿದ್ದಾರೆ. ಮುಂದಿನ ಸೀಸನ್ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂದು ಅಭಿಮಾನಿಗಳು ಊಹಿಸತೊಡಗಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಂತೆ - ಕಂತೆಗಳು ಹರಿದಾಡಿದ್ದವು. ಎಲ್ಲದಕ್ಕೂ ಕಿಚ್ಚ ಇಂದು ಸೂಕ್ತ ಉತ್ತರ ಕೊಟ್ಟಿದ್ದಾರೆ.
ಸುದೀಪ್ ಎಕ್ಸ್ ಪೋಸ್ಟ್:ಇತ್ತೀಚೆಗೆ ನಾನು ಮಾಡಿದ ಟ್ವೀಟ್ಗೆ ಸಂಬಂಧಿಸಿದಂತೆ ನಿಮ್ಮೆಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಈ ವಾತ್ಸಲ್ಯ ನಿಜವಾಗಿಯೂ ಮನಮುಟ್ಟುವಂತಿದೆ. ಅದಾಗ್ಯೂ, ಚಾನಲ್ ಮತ್ತು ನನ್ನ ನಡುವೆ ಮನಸ್ತಾಪಗಳಿವೆ ಎಂದು ಯಾವುದೇ ತರಹದ ಊಹೆಗಳನ್ನು ಮಾಡದಂತೆ ಕಾಮೆಂಟ್ಗಳು ಮತ್ತು ವಿಡಿಯೋಗಳನ್ನು ಮಾಡುವವರಲ್ಲಿ ವಿನಂತಿಸುತ್ತಿದ್ದೇನೆ. ನಾವು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ನಡೆಸಿದ್ದೇವೆ. "ಅಗೌರವ" ಎಂಬ ಪದವನ್ನು ಅದರೊಂದಿಗೆ ಸೇರಿಸಬೇಡಿ. ಈ ವಿಷಯದ ಸುತ್ತಲಿನ ಊಹಾಪೋಹಗಳು ಆಧಾರರಹಿತವಾಗಿವೆ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ನೊಂದಿಗಿನ ನನ್ನ ಸಂಬಂಧ ಅದ್ಭುತವಾಗಿದೆ. ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಅವರು ಪ್ರತಿಭಾವಂತ ಮತ್ತು ಎನರ್ಜಿಟಿಕ್ ವ್ಯಕ್ತಿತ್ವ. ನಾನು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿ ನಾನಲ್ಲ ಎಂದು ತಿಳಿಸಿದ್ದಾರೆ.