ಹುಬ್ಬಳ್ಳಿ (ಧಾರವಾಡ): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಶ್ರೀ ಸಿದ್ದಾರೂಢ ಮಠದ ಟ್ರಸ್ಟಿಯೊಬ್ಬರು ಹುಬ್ಬಳ್ಳಿ 'ಸಿದ್ದಾರೂಢರ ಚರಿತ್ರೆ ಪುಸ್ತಕ' ಹಾಗೂ ಅಂಗಾರವನ್ನು ಕೊರಿಯರ್ ಮೂಲಕ ಕಳುಹಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸತ್ಯ ಎಂದು ಧರ್ಮದರ್ಶಿಗಳು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ನೀಡಿದ ಶ್ರೀಮಠದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ: ಈ ಕುರಿತಂತೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಶ್ರೀಮಠದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರು, ಈ ಹಿಂದೆ ದರ್ಶನ್ ಶ್ರೀಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೊರಿಯರ್ ಮೂಲಕ ಸಿದ್ದಾರೂಢರ ಚರಿತ್ರೆ ಪುಸ್ತಕ ಹಾಗೂ ಅಂಗಾರವನ್ನು ಕಳುಹಿಸಿದ್ದೇವೆ ಎಂದು ದೃಢಪಡಿಸಿದ್ದಾರೆ.
'ಮನಶಾಂತಿ ದೊರಕಲಿದೆ': ಶ್ರೀ ಸಿದ್ದಾರೂಢರ ಕಥಾಮೃತ ಪುಸ್ತಕ 400 ಪುಟಗಳನ್ನು ಒಳಗೊಂಡಿದೆ. ಈ ಪುಸ್ತಕ ಓದುವುದರಿಂದ ಮಾನಸಿಕ ಖಿನ್ನತೆ ತೊಲಗುವುದರ ಜೊತೆಗೆ ಮಾನಸಿಕ ಶಾಂತಿ ಹಾಗೂ ನೆಮ್ಮದಿ ಸಿಗಲಿದೆ. ಶ್ರೀ ಸಿದ್ದಾರೂಢರ ಜೀವನದ ಹಲವು ಘಟನೆಗಳನ್ನು ಒಳಗೊಂಡಿರುವುದರಿಂದ, ಆಧ್ಯಾತ್ಮಿಕದತ್ತ ಒಲವು ಮೂಡಲಿದ್ದು, ಮನಶಾಂತಿಯೂ ದೊರಕಲಿದೆ ಎಂದು ಅವರು ತಿಳಿಸಿದರು.
ದರ್ಶನ್ಗೆ ಒಳ್ಳೆಯದಾಗಲಿ: ಕಳೆದ ಕೆಲ ದಿನಗಳಿಂದ ದರ್ಶನ್ ಜೈಲಿನಲ್ಲಿ ಒಬ್ಬಂಟಿಯಾಗಿದ್ದಾರೆ. ಏಕಾಂಗಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದರಿಂದ ಶ್ರೀ ಸಿದ್ದಾರೂಢರ ಪುಸ್ತಕ ಕಳುಹಿಸುವುದು ಸೂಕ್ತ ಅನಿಸಿತು. ಅಲ್ಲದೇ ದರ್ಶನ್ ಅವರು ಸಿದ್ದಾರೂಢ ಸ್ವಾಮೀಜಿಗಳ ಭಕ್ತರು. ಹಲವು ಬಾರಿ ಹುಬ್ಬಳ್ಳಿಗೆ ಬಂದಾಗ ಶ್ರೀಮಠಕ್ಕೆ ಭೇಟಿ ಕೊಟ್ಟು ಅಜ್ಜನ ಗದ್ದುಗೆ ದರ್ಶನ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರ ಏನು ಆಗಲಿದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಆದರೆ, ಸಿದ್ದಾರೂಢರ ಕೃಪೆಯಿಂದ ಅವರಿಗೆ ಒಳ್ಳೆಯದಾಗಲಿ ಎಂದು ಪುಸ್ತಕ ಹಾಗೂ ಅಂಗಾರ ಕಳುಹಿಸಿರುವುದಾಗಿ ಈಟಿವಿ ಭಾರತಕ್ಕೆ ಡಾ. ಗೋವಿಂದಪ್ಪ ಮಣ್ಣೂರು ಮಾಹಿತಿ ನೀಡಿದ್ದಾರೆ.