ರಾಯಚೂರು: ಬಿಸಿಲೂರು ರಾಯಚೂರಿಗೆ ಇಂದು ನಟ ಕಿಚ್ಚ ಸುದೀಪ್ ಭೇಟಿ ಕೊಟ್ಟಿದ್ದಾರೆ. ಹೈದರಾಬಾದ್ ಮೂಲಕ ನಗರಕ್ಕೆ ಆಗಮಿಸಿದ ಸುದೀಪ್ ದಂಪತಿ ಗಾಂಧಿ ಚೌಕ್ ಬಳಿ ಇರುವ ಶ್ರೀ ಹನುಮಾನ್ ದೇವಾಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ನೇರವೇರಿಸಿದರು. ಹನುಮಾನ್ ದೇವರ ದರ್ಶನ ಪಡೆದು, ಪೂಜೆ ನೆರವೇರಿಸಿದರು. ಅರ್ಚಕರ ಆಶೀವಾದ ಪಡೆದುಕೊಂಡು ಬಳಿಕ ಮಂತ್ರಾಲಯಕ್ಕೆ ತೆರಳಿದರು.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಆಗಮಿಸಿದ ವಿಚಾರ ತಿಳಿದ ಅಭಿಮಾನಿಗಳು ದೇವಾಲಯದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದ್ದರು. ಸುಡುವ ಬಿರು ಬಿಸಿಲನ್ನೂ ಲೆಕ್ಕಿಸದೇ ದೇವಸ್ಥಾನದ ಸುತ್ತಮುತ್ತ, ರಸ್ತೆ ಬದಿ, ಕಟ್ಟಡಗಳ ಮೇಲೆ ಕುಳಿತು ಜನರು ಕಾದು ಕುಳಿತಿದ್ದರು. ಕೆಲವರು ತೀವ್ರ ಬಿಸಿಲ ಹಿನ್ನೆಲೆ ಛತ್ರಿ (ಕೊಡೆ) ಹಿಡಿದು ನಿಂತಿದ್ದರು. ಆದ್ರೆ ದೇವಸ್ಥಾನದಿಂದ ಹೊರಗಡೆ ಬಂದ ಕೂಡಲೇ ಸುದೀಪ್ ಅಭಿಮಾನಿಗಳತ್ತ ಕೈಬೀಸಿ, ಸೀದಾ ಕಾರಿನಲ್ಲಿ ಹತ್ತಿ ಕುಳಿತರು. ಇತ್ತ ಗಂಟೆಗಟ್ಟಲೆ ಕಾದು ನಿಂತಿದ್ದ ಅಭಿಮಾನಿಗಳಿಗೆ ನಟನನ್ನು ಸರಿಯಾಗಿ ಕಣ್ತುಂಬಿಕೊಳ್ಳಲಾಗದೇ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಾಗದೇ ತೀವ್ರ ನಿರಾಶೆ ವ್ಯಕ್ತಪಡಿಸಿದರು.
ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂದು ಅಂದಾಜಿಸಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಿಸಿಲಿನಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಶನಿವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಸುದೀಪ್ ಆಗಮಿಸುವ ಹಿನ್ನೆಲೆ ಭಕ್ತರಿಗೆ ಕೆಲ ಸಮಯ ದೇವಾಲಯದ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಸುದೀಪ್ ಪೂಜೆ ನೆರವೇರಿಸುವ ವೇಳೆ ಕೆಲವೇ ಕೆಲ ಮಂದಿ ಇದ್ದರು. ಕೆಲ ಭಕ್ತರು ಹೊರಗಡೆ ಕೆಲ ಹೊತ್ತು ನಿಂತು, ನಮಸ್ಕರಿಸಿ ಹೋದರು. ಕಿಚ್ಚ ಸುದೀಪ್ ತೆರಳಿದ ಸ್ವಲ್ಪ ಸಮಯದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.