ಕೆ.ಕಲ್ಯಾಣ್. ಕನ್ನಡ ಚಿತ್ರರಂಗದಲ್ಲಿ ಪ್ರೇಮಕವಿ ಎಂದೇ ಫೇಮಸ್. ತಮ್ಮ 17ನೇ ವಯಸ್ಸಿನಲ್ಲೇ ಕನ್ನಡ ಚಿತ್ರಗಳಿಗೆ ಹಾಡುಗಳನ್ನು ಬರೆಯಲು ಶುರುಮಾಡಿದ ಇವರು ವಿಷ್ಣವರ್ಧನ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಸುದೀಪ್, ಯಶ್ ಸೇರಿದಂತೆ ಸ್ಟಾರ್ ನಟರುಗಳ ಸಿನಿಮಾಗೆ ತಮ್ಮ ಹಾಡು ಒದಗಿಸಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ 'ಗೌರಿ' ಸಿನಿಮಾಗೂ ಹಾಡುಗಳನ್ನು ಬರೆದಿದ್ದು, ತಮ್ಮ ವೃತ್ತಿಜೀವನದ ಮೆಲುಕು ಹಾಕಿದ್ದಾರೆ.
ಸಿನಿಮಾ ಸಾಂಗ್ಸ್, ಮ್ಯೂಸಿಕ್ ಆಲ್ಬಂಗಳು, ಭಕ್ತಿ ಪ್ರಧಾನ ಸೇರಿದಂತೆ 3,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಕೆ.ಕಲ್ಯಾಣ್ ತಮ್ಮ ಹಾಡುಗಳ ಬಗ್ಗೆ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಹಂಸಲೇಖ, ಎ.ಆರ್.ರೆಹಮಾನ್, ವಿಜಯ್ ಭಾಸ್ಕರ್, ರಾಜನ್ ನಾಗೇಂದ್ರ, ಉಪೇಂದ್ರ ಕುಮಾರ್ ಹಾಗೂ ಬಾಲಸುಬ್ರಹ್ಮಣ್ಯಂ ಸೇರಿದಂತೆ ಸಾಕಷ್ಟು ದಿಗ್ಗಜ ಸಂಗೀತ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುವ ಅನುಭವ ಇವರಿಗಿದ್ದು, ಪ್ರೇಮಕವಿ ಎಂದೇ ಜನಪ್ರಿಯರು.
ನಮ್ಮೂರ ಮಂದಾರ ಹೂವೆ ಸಿನಿಮಾದಿಂದ ಬೇಡಿಕೆ ಹೆಚ್ಚಿಸಿಕೊಂಡ ಕೆ.ಕಲ್ಯಾಣ್ ಬರವಣಿಗೆಗೆ ಸ್ಫೂರ್ತಿ ಆ ಸಿನಿಮಾದ ಕಥೆ. ಕಲ್ಯಾಣ್ ಚಿತ್ರದ ಎಲ್ಲಾ ದೃಶ್ಯಗಳನ್ನು ಬಹಳ ಪ್ರೀತಿಯಿಂದ ನೋಡುತ್ತಾರೆ. ನನಗೆ ಕಷ್ಟ ಅಂತಾ ಅನಿಸಿದಾಗ ನನಗೆ ಒಂದೇ ಒಂದು ಪದ ಬರೆಯಲೂ ಸಹ ಆಗಲ್ಲ. ಹಾಡು ಬರೆಯಲು ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಪ್ರೇರೇಪಿಸುತ್ತಾರೆ. ಆಗ ನಾನಗೆ ಬಹಳ ಅದ್ಭುತವಾದ ಹಾಡನ್ನು ಬರೆಯಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಬರೆದಿರುವ ಅಮೃತವರ್ಷಿಣಿ, ಚಂದ್ರಮುಖಿ ಪ್ರಾಣಸಖಿ, ಕೋಟಿಗೊಬ್ಬ, ಅಪ್ಪು, ಮಾಣಿಕ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳ ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಜನರು ಹಿಟ್ ಆದ ಹಾಡುಗಳ ಬಗ್ಗೆ ಮಾತನಾಡುವಾಗ ನಮಗೆ ಖುಷಿ ಯಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು ಬರೆದಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿಲ್ಲ. ನಿಮಗೆ ಗೊತ್ತೇ, ನಾನು ಬರೆದಿರೋ ಕೆಲ ಹಾಡುಗಳು ಹಿಟ್ ಆಗಿಲ್ಲ. ಆಗ ನನಗೆ ಏಕೆ ಆ ಹಾಡು ಜನರಿಗೆ ಇಷ್ಟ ಆಗಲಿಲ್ಲ ಅನ್ನೋದು ಕಾಡಲು ಶುರುವಾಗುತ್ತದೆ. ಆ ರೀತಿ ನನಗೆ ಸಾಕಷ್ಟು ಬಾರಿ ಆಗಿದೆ. ಕಲ್ಯಾಣಿ ಚಿತ್ರದಲ್ಲಿ ನಾನು 9 ಹಾಡುಗಳನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದೆ. ಆ ಸಿನಿಮಾದ ಹಾಡುಗಳು ಚೆನ್ನಾಗಿ ಬರಲೆಂದು ನನಗಿಂತ ಹಿರಿಯ ಸಂಗೀತ ವಿದ್ವಾಂಸರ ಜೊತೆ ಕೆಲಸ ಮಾಡಿದ್ದೆ. ಆ ಸಿನಿಮಾ ಮೇಲೆ ನನಗೆ ವಿಶ್ವಾಸ ಕೂಡಾ ಬಹಳಾನೇ ಇತ್ತು. ಆದ್ರೆ ಆ ಸಿನಿಮಾ ಜನರಿಗೆ ಇಷ್ಟ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.