ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಸಿಖಂದರ್' ಸಿನಿಮಾ ಇಂದು ಸೆಟ್ಟೇರಿತು. ಕಳೆದೆರಡು ತಿಂಗಳಿಂದ ತಮ್ಮ ನಿವಾಸದೆದುರು ನಡೆದ ಗುಂಡಿನ ದಾಳಿಯಿಂದಾಗಿ ಸುದ್ದಿಯಲ್ಲಿದ್ದ 'ಬಾಲಿವುಡ್ ಭಾಯ್ಜಾನ್' ಇದೀಗ ಸಿನಿಮಾ ಸೆಟ್ಗೆ ಹಿಂದಿರುಗಿದ್ದಾರೆ. ಸೆಟ್ನಿಂದ ಹೊರಬಿದ್ದಿರುವ ಸಲ್ಲು ನ್ಯೂ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಚಿತ್ರತಂಡದೊಂದಿಗಿನ ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್, ಸಿಖಂದರ್ ಚಿತ್ರತಂಡದೊಂದಿಗೆ 2025ರ ಈದ್ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಕೂಡ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಹಂಚಿಕೊಂಡು, 'ಸಿಕಂದರ್ ಟ್ರಿಯೋ. ಈ ಫೋಟೋ ಚಿತ್ರದ ಸೆಟ್ನಿಂದ' ಎಂದು ತಿಳಿಸಿದೆ.
ಸಲ್ಮಾನ್ ಖಾನ್ ಹೊಸ ನೋಟಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಅದ್ಭುತವಾಗಿ ಕಾಣುತ್ತಿದ್ದಾರೆ' ಎಂದು ಮೆಚ್ಚಿದ್ದಾರೆ. ಮತ್ತೊಬ್ಬರು, 'ಸಲ್ಮಾನ್ ದಿನದಿಂದ ದಿನಕ್ಕೆ ಚಿಕ್ಕವರಾಗಿ ಕಾಣುತ್ತಿದ್ದಾರೆ' ಎಂದು ಗುಣಗಾನ ಮಾಡಿದ್ದಾರೆ. ಉಳಿದಂತೆ, ಸಲ್ಮಾನ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ನ ಕಾಮೆಂಟ್ ಸೆಕ್ಷನ್ ರೆಡ್ ಹಾರ್ಟ್, ಫೈಯರ್ ಎಮೋಜಿಯಿಂದ ತುಂಬುತ್ತಿದೆ.
ಇದನ್ನೂ ಓದಿ:'ಕಲ್ಕಿ 2898 ಎಡಿ': ಭರ್ಜರಿ ಪ್ರೀ-ಬುಕಿಂಗ್, ಆರ್ಆರ್ಆರ್ ದಾಖಲೆ ಪುಡಿ ಪುಡಿ - Kalki 2898 AD
'ಗಜಿನಿ' ಮತ್ತು 'ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ'ಯಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸಲ್ಮಾನ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ. 2025ರ ಈದ್ಗೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಬ್ಯಾನರ್ ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ಬಿಗ್ ಬಜೆಟ್ನಲ್ಲಿ ನಿರ್ಮಿಸುತ್ತಿದೆ. 'ಪುಷ್ಪ' ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:'ಭೈರತಿ ರಣಗಲ್' ಜಾಗಕ್ಕೆ 'ಭೀಮ'ನ ಎಂಟ್ರಿ: ಹ್ಯಾಟ್ರಿಕ್ ಹೀರೋನ ಸಿನಿಮಾ ಮುಂದೂಡಿಕೆ - Bhairathi Ranagal Postponed
ಕಿಕ್, ಜುಡ್ವಾ ಮತ್ತು ಮುಜ್ಸೆ ಶಾದಿ ಕರೋಗಿ ಸಿನಿಮಾಗಳ ನಂತರ ಸಲ್ಮಾನ್ ಖಾನ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕೊನೆಯದಾಗಿ, 2014ರಲ್ಲಿ ಬಂದ ಕಿಕ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಇದೀಗ ಸಿಖಂದರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ಕೊನೆಯದಾಗಿ 2023ರ ನವೆಂಬರ್ನಲ್ಲಿ ತೆರೆಕಂಡ ಟೈಗರ್ 3ನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್ನಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿದ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.