'ಭೈರತಿ ರಣಗಲ್', ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭೈರತಿ ರಣಗಲ್ ಆಗಿ ಬೆಳ್ಳಿ ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಹುಟ್ಟಿಸಿರೋ ಚಿತ್ರ. 'ಮಫ್ತಿ' ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಪೋಸ್ಟರ್ನಿಂದಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ಹಿಂದೆ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಆದರೆ ಭೈರತಿ ರಣಗಲ್ ಆಗಸ್ಟ್ಗೆ ಬಿಡುಗಡೆಯಾಗುತ್ತಿಲ್ಲ. ಆ ಜಾಗಕ್ಕೆ ದುನಿಯಾ ವಿಜಯ್ ಅಭಿನಯಿಸಿ, ನಿರ್ದೇಶಿಸುತ್ತಿರುವ 'ಭೀಮ' ಚಿತ್ರ ಬರುತ್ತಿದೆ.
'ಭೈರತಿ ರಣಗಲ್' ಚಿತ್ರದಲ್ಲಿ ಶಿವರಾಜ್ಕುಮಾರ್ ಜೊತೆ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಸೇರಿದಂತೆ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.
ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಕಾರಣ, ಆಗಸ್ಟ್ನಲ್ಲಿ ಸಾಲುಸಾಲು ರಜೆಗಳಿವೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ, ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದರು. ಆದ್ರೀಗ ಭೈರತಿ ರಣಗಲ್ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿಲ್ಲ. ಕಾರಣ, ಶಿವಣ್ಣ ಪತ್ನಿ ಗೀತಾ ಪರ ಚುನಾವಣಾ ಪ್ರಚಾರಕ್ಕೆ ಹೋದ ಕಾರಣ ಚಿತ್ರೀಕರಣ ಬಾಕಿ ಉಳಿದಿದೆ. ಈ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ವಿಚಾರ ಶಿವಣ್ಣನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.