ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ 'ಭೈರತಿ ರಣಗಲ್' ಶುಕ್ರವಾರ, ನವೆಂಬರ್ 15ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ಮಫ್ತಿ ಪ್ರೀಕ್ವೆಲ್ ಅನ್ನು ಅಪಾರ ಸಂಖ್ಯೆಯ ಸಿನಿಪ್ರಿಯರು, ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಮಾ ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಭೈರತಿ ರಣಗಲ್ ಬಾಕ್ಸ್ ಆಫೀಸ್ ಕಲೆಕ್ಷನ್:2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಭೈರತಿ ರಣಗಲ್ ಅಂದುಕೊಂಡಂತೆ ಕಳೆದ ದಿನ ಸಖತ್ ಗ್ರ್ಯಾಂಡ್ ಆಗಿಯೇ ಬಿಡುಗಡೆ ಆಗಿದೆ. ಚಿತ್ರಮಂದಿರಗಳೆದುರು ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ತಮ್ಮ ಮೆಚ್ಚಿನ ನಟನ ಮಾಸ್ ಸಿನಿಮಾವನ್ನು ಹಬ್ಬದಂತೆ ಆಚರಿಸಿದ್ದಾರೆ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ಅಂಕಿ-ಅಂಶಗಳು ಸಹ ಉತ್ತಮವಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಭೈರತಿ ರಣಗಲ್ ತೆರೆಕಂಡ ದಿನ ಬರೋಬ್ಬರಿ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇತ್ತೀಚೆಗಷ್ಟೇ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಖ್ಯಭೂಮಿಕೆಯ ಬಘೀರ ಉತ್ತಮ ಪ್ರದರ್ಶನ ಕಂಡು ಸ್ಯಾಂಡಲ್ವುಡ್ಗೆ ಗೆಲುವು ತಂದುಕೊಟ್ಟಿತ್ತು. ಇದೀಗ ಹ್ಯಾಟ್ರಿಕ್ ಹೀರೋನ ಸಿನಿಮಾ ಆ ಗೆಲುವನ್ನು ಮುಂದುವರಿಸಿದೆ. ಅಭಿಮಾನಿಗಳು ಚಿತ್ರತಂಡದಿಂದ ಕಲೆಕ್ಷನ್ನ ಅಧಿಕೃತ ಘೋಷಣೆ ನಿರೀಕ್ಷಿಸಿದ್ದಾರೆ.
'ಜನುಮದ ಜೋಡಿ' ಬಿಡುಗಡೆಯಾಗಿದ್ದ ದಿನವೇ ಭೈರತಿ ರಣಗಲ್ ತೆರೆಗೆ:ಶಿವರಾಜ್ಕುಮಾರ್ ಅಭಿನಯದ 'ಜನುಮದ ಜೋಡಿ' ಸಿನಿಮಾ 1996ರಲ್ಲಿ ನವೆಂಬರ್ 15ರಂದು ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. 2024ರಲ್ಲಿ ಭೈರತಿ ರಣಗಲ್ ಕೂಡಾ ಅದೇ ದಿನಾಂಕದಂದು ತೆರೆಗಪ್ಪಳಿಸಿ, ಗೆಲುವಿನ ಹಾದಿಯಲ್ಲಿ ಸಾಗಿದೆ.