ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಕೊಡುತ್ತಿರುವ ನಟ. ನಿನ್ನೆಯಷ್ಟೇ ಕೇರಳದಲ್ಲಿ ಸರಳವಾಗಿ ಕುಟುಂಬಸ್ಥರೊಂದಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಜನ್ಮದಿನದ ವಿಶೇಷವಾಗಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್ಗಳ ಪೈಕಿ ತುಂಬಾನೇ ಸ್ಪೆಷಲ್ ಎನಿಸಿಕೊಂಡಿರುವುದು ಶಿವಣ್ಣನ 131ನೇ ಚಿತ್ರದ ಝಲಕ್.
ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆ ತಂದು ಶಿವಣ್ಣನಿಗೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿಸಿದ್ದ ಸುಧೀರ್ ಮತ್ತೊಮ್ಮೆ ಕರುನಾಡ ಕಿಂಗ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೊದಲ ಝಲಕ್ ಶಿವಣ್ಣನ ಹುಟ್ಟುಹಬ್ಬಕ್ಕೆ ಅನಾವರಣಗೊಂಡಿದೆ.
ಶಿವಣ್ಣನ ಜನ್ಮದಿನದ ನಿಮಿತ್ತ ಈ 131ನೇ ಚಿತ್ರದ ಮೊದಲ ತುಣುಕನ್ನು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋನ ಇಂಟ್ರೊಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುವ ರೀತಿ ಅದ್ಭುತವಾಗಿದೆ. ಆದರೆ ಶಿವಣ್ಣ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲ. ಐ ಆಮ್ ಕಮಿಂಗ್ ಎನ್ನುವ ಕರುನಾಡ ಕಿಂಗ್ನ ಫೋಟೋ ಒಂದು ಬಿಟ್ಟು ಚಿತ್ರತಂಡ ಥ್ರಿಲ್ ಹೆಚ್ಚಿಸಿದೆ. ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.