ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹಾಗೂ ಜನಪ್ರಿಯ ನಿರ್ದೇಶಕ ನರ್ತನ್ ಕಾಂಬಿನೇಶನ್ನಲ್ಲಿ ರೆಡಿಯಾಗಿರುವ 'ಭೈರತಿ ರಣಗಲ್' ಬಿಡುಗಡೆಯ ಹೊಸ್ತಿಲಿನಲ್ಲಿದೆ. ಅದ್ಭುತ ಮನರಂಜನೆ ಸಿಗಲಿದೆ ಎಂಬ ಭರವಸೆ ಮೂಡಿಸಿರುವ ಚಿತ್ರದ ಪ್ರಚಾರ ಕೆಲಸಗಳು ಸಾಗಿವೆ. ನವೆಂಬರ್ 15ಕ್ಕೆ ತೆರೆಗೆ ಬರಲಿರುವ ಚಿತ್ರದ ಹೊಸ ಟೀಸರ್ ಅನಾವರಣಗೊಂಡಿದೆ. ಒಂದೇ ಒಂದು ಸಣ್ಣ ಡೈಲಾಗ್ ಕೂಡಾ ಇಲ್ಲದೇ ಇರುವ ಈ ಟೀಸರ್ನಲ್ಲಿ ಶಿವರಾಜ್ ಕುಮಾರ್ ತಮ್ಮ ಕಣ್ಣಲ್ಲೇ ಸಂದೇಶ ರವಾನಿಸಿದ್ದಾರೆ. ಶಿವಣ್ಣನ ಲುಕ್ಕೇ ಟೀಸರ್ನ ಹೈಲೆಟ್ಸ್ ಎನ್ನಬಹುದು.
2017ರಲ್ಲಿ ತೆರೆಕಂಡು ಹಿಟ್ ಆದ 'ಮಫ್ತಿ' ಚಿತ್ರದಲ್ಲಿ ಶಿವ ರಾಜ್ಕುಮಾರ್ 'ಭೈರತಿ ರಣಗಲ್' ಎಂಬ ಪಾತ್ರ ನಿರ್ವಹಿಸಿದ್ದರು. ಆ ರೋಲ್ ಪ್ರೇಕ್ಷಕರಿಗೆ ಹಿಡಿಸಿತ್ತು ಕೂಡಾ. ಇದೀಗ ಅದೇ ಪಾತ್ರವನ್ನು ಕೇಂದ್ರವಾಗಿರಿಸಿ ನಿರ್ದೇಶಕ ಕಥೆ ಕಟ್ಟಿಕೊಟ್ಟಿದ್ದಾರೆ. ಇದು ಮಫ್ತಿಯ ಪ್ರೀಕ್ವೆಲ್ ಕೂಡಾ ಹೌದು. ಮಫ್ತಿ ಇಷ್ಟಪಟ್ಟಿದ್ದ ಪ್ರೇಕ್ಷಕರು ಮತ್ತು ಶಿವಣ್ಣನ ಅಭಿಮಾನಿಗಳು ಚಿತ್ರದ ಮತ್ತೊಂದು ಭಾಗ ವೀಕ್ಷಿಸಲು ಸಜ್ಜಾಗಿದ್ದಾರೆ. ಅವರ ಕುತೂಹಲವನ್ನು ಹೊಸ ಟೀಸರ್ ಕೆರಳಿಸಿದೆ. ಟೀಸರ್ನಲ್ಲಿ ಸಿನಿಮಾದ ಮೇಕಿಂಗ್ ಹೇಗಿರಬಹುದು ಎಂಬ ಸಣ್ಣ ಸುಳಿವಿದೆ.
ಹೊಸದಾಗಿ ಬಿಡುಗಡೆಯಾಗಿರುವ ಟೀಸರ್ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಆದಾಗ್ಯೂ ದೃಶ್ಯಗಳು ಕಿಚ್ಚು ಹಚ್ಚುವಂತಿವೆ. ಸೆಂಚುರಿ ಸ್ಟಾರ್ನ ಆ ನೋಟವಷ್ಟೇ ಸಾಕು ಅಂತಿದ್ದಾರೆ ಫ್ಯಾನ್ಸ್. ಸದ್ದಿಲ್ಲದೇ ಒಂದು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಪಾತ್ರಕ್ಕೆ ಶಿವ ರಾಜ್ಕುಮಾರ್ ಜೀವ ತುಂಬಿದ್ದಾರೆ. ಹಾಗಾಗಿ ಸಂಪೂರ್ಣ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.