ಏಳು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಜೂನ್ 23ರಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಂತರ್ಧರ್ಮೀಯ ಮದುವೆ ಹಿನ್ನೆಲೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸೋಷಿಯಲ್ ಮೀಡಿಯಾಗಳಲ್ಲಿ ಮಾದರಿ ದಂಪತಿಯಂತೆ ಕಂಗೊಳಿಸುತ್ತಿದ್ದಾರೆ ಈ ಪ್ರೇಮಪಕ್ಷಿಗಳು.
ವಿಭಿನ್ನ ಧಾರ್ಮಿಕ ಆಚರಣೆಗಳ ಹಿನ್ನೆಲೆ, ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ದಂಪತಿ ತಮ್ಮ ಮಗಳು ಜಹೀರ್ ಅವರನ್ನು ಮದುವೆಯಾಗುವ ನಿರ್ಧಾರವನ್ನು ಆರಂಭದಲ್ಲಿ ಸಂಪೂರ್ಣವಾಗಿ ಬೆಂಬಲಿಸಿರಲಿಲ್ಲ ಎಂಬ ವದಂತಿಗಳು ಈ ಹಿಂದೆ ಹರಡಿದ್ದವು. ಅದೇನೇ ಇದ್ದರೂ ದಂಪತಿಗಳ ಮತ್ತು ಪಾಪರಾಜಿಗಳ ಸೋಷಿಯಲ್ ಮೀಡಿಯಾ ಪೋಸ್ಟ್, ಅವರ ಕುಟುಂಬದಲ್ಲಿನ ಪ್ರೀತಿಯನ್ನು ಎತ್ತಿ ತೋರಿಸಿದೆ. ಇದೀಗ, ಸೋನಾಕ್ಷಿ ಮತ್ತು ಜಹೀರ್ ಮದುವೆಗೆ ತಮ್ಮ ಬಲವಾದ ಬೆಂಬಲವನ್ನು ಬಹಿರಂಗವಾಗಿ ದೃಢೀಕರಿಸಲು ಮಧುಮಗಳ ತಂದೆ, ನಟ - ರಾಜಕಾರಣಿ ಶತ್ರುಘ್ನ ಅವರು ಮುಂದೆ ಬಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಶತ್ರುಘ್ನ ಸಿನ್ಹಾ, ಈ ಮದುವೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ಜೋಡಿಗೆ "ಮೇಡ್ ಫಾರ್ ಈಚ್ ಅದರ್" ಎಂದು ಉಲ್ಲೇಖಿಸಿದ್ದಾರೆ.