ಶಾಹಿದ್ ಕಪೂರ್ ಹಾಗೂ ಪೂಜಾ ಹೆಗ್ಡೆ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದೇವ'. ಚಿತ್ರೀಕರಣ ಪುನಾರಂಭಗೊಂಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಮುಖೇನ ಖಚಿತಪಡಿಸಿದ್ದಾರೆ. ನಟನ ಕುತೂಹಲಕಾರಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ನಟ ಶಾಹಿದ್ ಕಪೂರ್ ಅವರಿಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮೋನೋಕ್ರೋಮ್ ಫೋಟೋ ಶೇರ್ ಮಾಡಿದ್ದಾರೆ. ಕ್ಯಾಮೆರಾದತ್ತ ಬೆನ್ನು ತಿರುಗಿಸಿ ನಿಂತಿರುವ ಶಾಹಿದ್ ಟ್ಯಾಂಕ್ ಟೀ ಶರ್ಟ್, ಡೆನಿಮ್ ಧರಿಸಿದ್ದಾರೆ. ಬಾಯಿಂದ ಹೊಗೆ ಬರುತ್ತಿದೆ. ಪೋಸ್ಟ್ ಶೇರ್ ಮಾಡಿದ ನಟ, "ಬ್ಯಾಕ್ ಆನ್ ಸೆಟ್ ದೇವ" ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ 'ದೇವ' ಒಂದು ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಚಿತ್ರ ಎಂದು ಬಹಿರಂಗಪಡಿಸಿದ್ದರು. ದೊಡ್ಡ ಮಟ್ಟದ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದೆ ಎಂದು ತಿಳಿಸಿದ್ದರು. ಸವಾಲಿನ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಶಾಹಿದ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು "ಬಹಳ ಕಠಿಣ ಪಾತ್ರ" ಎಂದು ಶಾಹಿದ್ ಉಲ್ಲೇಖಿಸಿದ್ದರು. ಇತ್ತೀಚೆಗೆ, ಮುಂಬೈನಲ್ಲಿ ನಡೆದ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆಯಲ್ಲಿ ತೀರ್ಪುಗಾರರಾಗಿದ್ದ ನಟಿ ಪೂಜಾ ಹೆಗ್ಡೆ ಕೂಡ ಸಾಮಾಜಿಕ ಮಾಧ್ಯಮದ ಮೂಲಕ ದೇವ ಸೆಟ್‌ಗೆ ಮರಳಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೆಲ್ಯೂಟ್ ಮತ್ತು ಕಾಯಂಕುಲಂ ಕೊಚುನ್ನಿಯಂತಹ ಸಿನಿಮಾಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ರೋಶನ್ ಆ್ಯಂಡ್ರ್ಯೂಸ್ ಅವರು 'ದೇವ'ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಝೀ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಇದೇ ಸಾಲಿನ ದಸರಾ ಸಂದರ್ಭ ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ:ಒಂದೇ ಸಿನಿಮಾದಲ್ಲಿ ಬಾಲಿವುಡ್ ಖಾನ್ಸ್: ಅಭಿಮಾನಿಗಳಿಗಾಗಿ ಸಲ್ಮಾನ್, ಶಾರುಖ್, ಅಮೀರ್ ಸ್ಕ್ರೀನ್ ಶೇರ್
ಶಾಹಿದ್ ಕಪೂರ್ ಕೊನೆಯದಾಗಿ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಸಿನಿಮಾದಲ್ಲಿ ಕಾಣಿಸಿಕೊಂಡರು. ಚಿತ್ರ ಫೆ. 9ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಬಾಕ್ಸ್ ಆಫೀಸ್ ವಿಚಾರದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಇದೇ ಮೊದಲ ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ಜೊತೆ ಶಾಹಿದ್ ಕಪೂರ್ ಸ್ಕ್ರೀನ್ ಶೇರ್ ಮಾಡಿದ್ದು, ಜೋಡಿಯ ಕೆಮಿಸ್ಟ್ರಿಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಅಮಿತ್ ಜೋಶಿ ಮತ್ತು ಆರಾಧಾನ ಶಾ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಡಿಂಪಲ್ ಕಪಾಡಿಯಾ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಟನ ಮುಂದಿನ ಚಿತ್ರಗಳ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದು, 'ದೇವ' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:RC16: ರಾಮ್ ಚರಣ್ ಸಿನಿಮಾ ಸೆಟ್ಟೇರೋದು ಯಾವಾಗ? ಡೀಟೆಲ್ಸ್ ಇಲ್ಲಿದೆ