ಮುಂಬೈ, ಮಹಾರಾಷ್ಟ್ರ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಸಿನಿಜೀವನದ ಮೊದಲ ಪ್ರಮುಖ ಧಾರಾವಾಹಿ 'ಫೌಜಿ' 1989 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈಗ ಈ ಧಾರಾವಾಹಿಯ ಎಲ್ಲ 13 ಎಪಿಸೋಡ್ಗಳನ್ನು ದೂರದರ್ಶನ ಮರುಪ್ರಸಾರ ಮಾಡಲಿದೆ. ಅಕ್ಟೋಬರ್ 24ರ ಗುರುವಾರದಿಂದ ಫೌಜಿ ಧಾರಾವಾಹಿಯ ಮರು ಪ್ರಸಾರ ಪ್ರಾರಂಭವಾಗಲಿದೆ. ಪ್ರತಿ ಸೋಮವಾರದಿಂದ ಗುರುವಾರದವರೆಗೆ ಡಿಡಿ ನ್ಯಾಷನಲ್ನಲ್ಲಿ ಎಪಿಸೋಡ್ಗಳು ಪ್ರಸಾರವಾಗಲಿದ್ದು, ಶಾರುಖ್ ಖಾನ್ ಅಭಿಮಾನಿಗಳು ಮತ್ತೊಮ್ಮೆ ಅವರ ಅಪ್ರತಿಮ ಅಭಿನಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇನ್ನೇನು ಕೆಲ ದಿನಗಳಲ್ಲಿ ಫೌಜಿ 2 ಪ್ರಸಾರ:ಈ ಕುರಿತು ಮಾಹಿತಿ ನೀಡಿದ ದೂರದರ್ಶನದ ಮಹಾನಿರ್ದೇಶಕ ಕಾಂಚನ್ ಪ್ರಸಾದ್, "ಫೌಜಿ ಒಂದು ಕಾಲಾತೀತ ಕ್ಲಾಸಿಕ್ ಆಗಿದ್ದು, ಅದು ಪ್ರೇಕ್ಷಕರೊಂದಿಗೆ ಅನುರಣಿಸುತ್ತಲೇ ಇದೆ. ಇನ್ನೇನು ಕೆಲ ದಿನಗಳಲ್ಲಿ ಫೌಜಿ 2 ಪ್ರಸಾರವಾಗಲಿದ್ದು, ಅದಕ್ಕೂ ಮುನ್ನ ಮೂಲ ಸರಣಿಯನ್ನು ಪ್ರಸಾರ ಮಾಡುವುದರಿಂದ ಹಿಂದಿನ ಕಥೆಯೊಂದಿಗೆ ಮರುಸಂಪರ್ಕಿಸಲು ಮತ್ತು ಅದರ ಮುಂದಿನ ಅಧ್ಯಾಯವು ತೆರೆದುಕೊಳ್ಳುವ ಮೊದಲು ಅದರ ಪರಂಪರೆಯನ್ನು ಸಂಭ್ರಮಿಸಲು ಪರಿಪೂರ್ಣ ಮಾರ್ಗವಾಗಿದೆ." ಎಂದರು.
ಅಭಿಮನ್ಯು ರಾಯ್ ಪಾತ್ರ:ರಾಜ್ ಕುಮಾರ್ ಕಪೂರ್ ನಿರ್ದೇಶನದ 'ಫೌಜಿ' ಧಾರಾವಾಹಿಯಲ್ಲಿ ಭಾರತೀಯ ಸೇನೆಯ ಕಮಾಂಡೋ ರೆಜಿಮೆಂಟ್ ತರಬೇತಿಯನ್ನು ಚಿತ್ರಿಸಲಾಗಿದೆ. ಇದು ದೂರದರ್ಶನದಲ್ಲಿ ಪ್ರಸಾರವಾದ ಶಾರುಖ್ ಖಾನ್ ಅವರ ಮೊದಲ ಧಾರಾವಾಹಿ ಅಥವಾ ಚಿತ್ರವಾಗಿತ್ತು. ಇದರಲ್ಲಿ ಶಾರುಖ್ ಖಾನ್ ಲೆಫ್ಟಿನೆಂಟ್ ಅಭಿಮನ್ಯು ರಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಹೊಸ ಯೋಧರ ಕಥೆ ಇದು:ಭಾರತೀಯ ಸೇನೆಯಲ್ಲಿ ಕಮಾಂಡೋಗಳಾಗಲು ತರಬೇತಿ ಪಡೆಯಲು ಪ್ರಾರಂಭಿಸುವ ಹೊಸ ಯೋಧರ ಕಥೆ ಇದಾಗಿದೆ. ಈ ಸರಣಿಯು ದೈಹಿಕ ತರಬೇತಿ, ಪರಸ್ಪರ ತಮಾಷೆಗಳು ಮತ್ತು ತಮ್ಮ ಅಧಿಕಾರಿಗಳಿಂದ ಅವರು ಪಡೆಯುವ ಶಿಕ್ಷೆಗಳು ಸೇರಿದಂತೆ ನೇಮಕಗೊಂಡವರ ದೈನಂದಿನ ಹೋರಾಟಗಳನ್ನು ಎತ್ತಿ ತೋರಿಸಿದೆ.