ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಎಲಿಮಿನೇಶನ್ ಪೂರ್ಣಗೊಂಡಿದೆ. ಮೊದಲ ವಾರ ನಟಿ ಯಮುನಾ ಶ್ರೀನಿಧಿ ಅವರು ಮನೆಯಿಂದ ಹೊರನಡೆದಿದ್ದಾರೆ. ದನಿ ಏರಿಸಿ ಸುದ್ದಿಯಾಗಿದ್ದ ನಟಿ ಮೊದಲ ವಅರವೇ ಮನೆಯಿಂದ ಹೊರನಡೆದಿರುವುದು ಬಹುತೇಕರಿಗೆ ಆಶ್ಚರ್ಯ ಮೂಡಿಸಿದೆ. ಜನಪ್ರಿಯ ಕಾರ್ಯಕ್ರಮದ ಫಿನಾಲೆ ಹಂತ ತಲುಪಬೇಕು, ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂದುಕೊಂಡು ಬಂದ ಯಮುನಾ ಅವರಿಗೆ ನಿರಾಸೆಯಾಗಿದೆ.
ಕಳೆದ ಭಾನುವಾರ ಅದ್ಧೂರಿಯಾಗಿ ಕಾರ್ಯಕ್ರಮ ಆರಂಭಗೊಂಡಿತ್ತು. ನೋಡ ನೋಡುತ್ತಿದ್ದಂತೆ ಒಂದು ವಾರ ಪೂರ್ಣಗೊಂಡು, ಎರಡನೇ ವಾರ ಶುರುವಾಗಿಬಿಟ್ಟಿದೆ. ಮನೆಯೊಳಗೆ ಮೊದಲ ವಾರವೇ ಊಹೆಗೂ ಮೀರಿ ಚರ್ಚೆ, ವಾದ ವಿವಾದ, ಜಗಳ, ಕಿರುಚಾಟಗಳು ನಡೆದಿವೆ. ಯಮುನಾ ಶ್ರೀನಿಧಿ ಜೊತೆ ಹಂಸಾ, ಗೌತಮಿ ಜಾದವ್, ಭವ್ಯಾ, ಚೈತ್ರಾ ಕುಂದಾಪುರ, ಮಾನಸಾ, ಶಿಶಿರ್ ಮತ್ತು ಮೋಕ್ಷಿತಾ ಅವರು ಎಲಿಮಿನೇಟ್ ಅಗಿದ್ದರು. ಹಂಸಾ ಕ್ಯಾಪ್ಟನ್ ಆದ ಹಿನ್ನೆಲೆ ಈ ವಾರ ಮನೆಯಿಂದ ಹೊರನಡೆಯುವುದಿಲ್ಲ ಎಂದು ಊಹಿಸಲಾಗಿತ್ತು. ಆದ್ರೆ ಮನೆಯಲ್ಲಿ ಸೇಫ್ ಆಗಿ ಕೊನೆಯಲ್ಲಿ ಉಳಿದ ಎರಡು ಹೆಸರುಗಳೇ ಯಮುನಾ ಶ್ರೀನಿಧಿ ಮತ್ತು ಹಂಸಾ. ಈ ಇಬ್ಬರಲ್ಲಿ ಯಮುನಾ ಅವರು ಎಲಿಮಿನೇಟ್ ಆಗಿ, ಹಂಸಾ ಈ ವಾರ ಅಲ್ಲದೇ ಮೂರನೇ ವಾರಕ್ಕೂ ಎಂಟ್ರಿ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ಈ ವಾರ ನಾಮಿನೇಶನ್ನಿಂದ ಪಾರಾಗಿದ್ದಾರೆ.
ನಟಿ ಯಮುನಾ ಶ್ರೀನಿಧಿ ಮೊದಲ ವಾರ ಸಾಕಷ್ಟು ಸಕ್ರಿಯರಾಗಿ ತಮ್ಮನ್ನು ಮನೆಯವರೊಂದಿಗೆ ತೊಡಗಿಸಿಕೊಂಡಿದ್ದರೂ ಕೂಡಾ ಕಡಿಮೆ ಮತಗಳ ಹಿನ್ನೆಲೆ ಮನೆಯಿಂದ ಹೊರ ನಡೆದಿದ್ದಾರೆ. ಇದು ಬಹುತೇಕ ಜನರಿಗೆ ಶಾಕಿಂಗ್ ನ್ಯೂಸ್. ಹಲವು ಸನ್ನಿವೇಶಗಳಲ್ಲಿ ಧೈರ್ಯದಿಂದ, ಗಟ್ಟಿ ದನಿಯೊಂದಿಗೆ ಮುನ್ನುಗ್ಗಿದರೂ ಕೂಡಾ ಎಲಿಮಿನೇಶನ್ ಬಿಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಎಲಿಮಿನೇಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸೋಮವಾರದ ಪ್ರೋಮೋ: ''ಒಡಕು, ಬಿರುಕು, ಮಸಿ : ಮನೆ ಈಗ ರಣಾಂಗಣ! ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30'' ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಪ್ರೋಮೋ ಅನಾವರಣಗೊಂಡಿದೆ. ಇಂದಿನ ಸಂಚಿಕೆ ಕೂಡಾ ಅದೇ ಹಳೇ ಕಿರುಚಾಟಗಳಿಂದ ಕೂಡಿದೆ ಎಂಬುದರ ಸುಳಿವನ್ನು ಈ ಪ್ರೋಮೋ ಕೊಟ್ಟಿದೆ.