'ಪುಷ್ಪ 2: ದಿ ರೂಲ್' ಚಿತ್ರದ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ನ್ಯಾಯಾಲಯವು ಸಾಮಾನ್ಯ ಜಾಮೀನು (Regular Bail) ಮಂಜೂರು ಮಾಡಿದೆ. ಭಾರಿ ಜನಸಂದಣಿಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನಪ್ಪಿ, ಅವರ ಮಗ ತೀವ್ರವಾಗಿ ಗಾಯಗೊಂಡಿದ್ದ. ಆತನಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಹಿಂದೆ ತನ್ನ ತೀರ್ಪನ್ನು ಜನವರಿ 3ಕ್ಕೆ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮವಾಗಿ ಇಂದು ತನ್ನ ಆದೇಶ ಪ್ರಕಟಿಸಿದ್ದು, ನಟನಿಗೆ ರಿಲೀಫ್ ನೀಡಿದೆ. ಚಿಕ್ಕಡಪಲ್ಲಿ ಪೊಲೀಸರು ಜಾಮೀನು ಮನವಿಯನ್ನು ಬಲವಾಗಿ ವಿರೋಧಿಸಿದ್ದರು. ಕಾರ್ಯಕ್ರಮದ ಸುರಕ್ಷತಾ ಕ್ರಮಗಳನ್ನು ಪ್ರಶ್ನಿಸಿ ಕೌಂಟರ್-ಅಫಿಡವಿಟ್ ಸಲ್ಲಿಸಿದ್ದರು. ಜನಸಂದಣಿ ನಿರ್ವಹಣೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದರು.
ಅಲ್ಲು ಅರ್ಜುನ್ ಅವರ ಕಾನೂನು ತಂಡ ಈ ಮೇಲೆ ತಿಳಿಸಲಾದ ಆರೋಪಗಳನ್ನು ಎದುರಿಸಿತು. ನಟ ನೇರವಾಗಿ ಘಟನೆಯಲ್ಲಿ ಭಾಗಿಯಾಗಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಬಿಎಸ್ಎನ್ ಸೆಕ್ಷನ್ 105ರ ಅಡಿ ಬರುವುದಿಲ್ಲ ಎಂದು ವಾದಿಸಿದರು. ಆದರೆ ತನಿಖೆಯೊಂದಿಗೆ ಅವರ ಸಹಕಾರ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅವರು ಹೊಂದಿರುವ ಬದ್ಧತೆಯನ್ನು ಒತ್ತಿ ಹೇಳಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ನಟನಿಗೆ ರೆಗ್ಯುಲರ್ ಬೇಲ್ ಮಂಜೂರು ಮಾಡಿತು. ಕಸ್ಟಡಿ ಇಲ್ಲದೇ ತನಿಖೆ ಮುಂದುವರಿಸಬಹುದು ಎಂದು ಸೂಚಿಸಿತು.